ರಾಮನಗರ: ಸೇವೆ ಕಾಯಂಗೊಳಿಸುವುದು, ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಳ ಮಾಡುವುದು, ಗ್ರಾಚ್ಯುಯಿಟಿ ಹಣ ಬಿಡುಗಡೆ, ನಿವೃತ್ತ ನೌಕರರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಧರಣಿ ನಡೆಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೌಕರರು, ಜಿಲ್ಲಾಧಿಕಾರಿ ಕಚೇರಿ ಸಮೀಪ ನಿಗದಿಪಡಿಸಿರುವ ಸ್ಥಳದಲ್ಲಿ ಬೆಳಿಗ್ಗೆ ಜಮಾಯಿಸಿ ಧರಣಿ ನಡೆಸಿದರು. ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರ 2018ರಿಂದ ಗೌರವ ಧನ ಹೆಚ್ಚಳ ಮಡಿಲ್ಲ. ಕುಡಲೇ ಗೌರವ ಧನವನ್ನು ₹26 ಸಾವಿರಕ್ಕೆ ಹೆಚ್ಚಿಸಬೇಕು. ಶಿಕ್ಷಣ ಇಲಾಖೆಯು ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿರುವ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು, ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು, ಮತದಾನಕ್ಕೆ ಸಂಬಂಧಿಸಿದಂತೆ ಬಿಎಲ್‌ಒ ಕೆಲಸದಿಂದ ನೌಕರರನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ನೌಕರರಿಗೆ ಸಾಮೂಹಿಕ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಅಂಗನವಾಡಿಗಳಿಗೆ ಕೊಡುವ ಪೌಷ್ಠಿಕ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು. ಜಿಲ್ಲಾಧಿಕಾರಿ ಅಧ್ಯಕ್ಷತೆಯನ್ನು ಆಹಾರದ ಮೆನು ಅಂತಿಮಗೊಳ್ಳುವ ವ್ಯವಸ್ಥೆ ಜಾರಿಯಾಗಬೇಕು. ಅಂಗನವಾಡಿಗಳಿಗೆ ಮೂಲಸೌಕರ್ಯ ಒದಗಿಸಬೇಕು. ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿ ಮಾಡಬೇಕು. ಸಹಾಯಕಿಯರು ಇಲ್ಲದಿರುವ ಕಡೆ ತಾತ್ಕಾಲಿಕ ಸಹಾಯಕಿಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳನ್ನಾಗಿ ಪರಿವರ್ತಿಸುವ ತನಕ ಸಹಾಯಕಿಯರನ್ನು ಕೊಡಬೇಕು. ಪೂರ್ಣ ಕಾರ್ಯಕರ್ತೆಯರಿಗೆ ಕೊಡುವಷ್ಟು ಗೌರವಧನ ಹೆಚ್ಚಿಸಬೇಕು. ಅಂಗನವಾಡಿ ಕೇಂದ್ರದ ಚಟುವಟಿಕೆಗಳನ್ನು ಮೊಬೈಲ್‍ನಲ್ಲಿ ದಾಖಲೆ ನಿರ್ವಹಣೆ ಮಾಡಿದರೆ, ಪುಸ್ತಕದಲ್ಲಿ
ಬರೆಯುವುದನ್ನು ನಿಲ್ಲಿಸಬೇಕು.ಇಲಾಖೆ ನಡೆಸುವ ಮಾಸಿಕ ಮತ್ತು ಗೌರವಧನದ ಸಭೆಗಳಲ್ಲಿ ನೌಕರರಿಗೆ ಕುರ್ಚಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಜೆ ಧರಣಿನಿರತರ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಚಂದ್ರಯ್ಯ, ಬೇಡಿಕೆಗಳನ್ನ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಗೌರವ ಅಧ್ಯಕ್ಷೆ ಸಿ. ಜಯಲಕ್ಷ್ಮಮ್ಮ, ಖಜಾಂಚಿ ಶಾರದಾ, ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಸಿಐಟಿಯು ರಾಘವೇಂದ್ರ, ಚಂದ್ರಶೇಖರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.