ADVERTISEMENT

ರಾಮನಗರ: ಕೋರ್ಟ್ ಬಳಿ ಲಾಂಗ್ ತೋರಿಸಿ ಕೊಲೆ ಬೆದರಿಕೆ

ವಿಚಾರಣೆಗಾಗಿ ಬಂದಿದ್ದ ಆರೋಪಿಯ ಅಡ್ಡಗಟ್ಟಿ ಕೃತ್ಯ; ಕೊಲೆ ಸಂಚು ರೂಪಿಸಿದ್ದ ಇಬ್ಬರು ರೌಡಿಶೀಟರ್‌ಗಳ ಬಂಧನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:30 IST
Last Updated 24 ಡಿಸೆಂಬರ್ 2025, 6:30 IST
ಅಭಿಷೇಕ್ ಗೌಡ
ಅಭಿಷೇಕ್ ಗೌಡ   

ರಾಮನಗರ: ಪ್ರಕರಣದ ವಿಚಾರಣೆಗಾಗಿ ನಗರದ ಕೋರ್ಟ್‌ಗೆ ಬಂದಿದ್ದ ಆರೋಪಿಗೆ, ಪ್ರವೇಶ ದ್ವಾರದ ಬಳಿ ಲಾಂಗ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಇಬ್ಬರು ರೌಡಿಶೀಟರ್‌ಗಳನ್ನು ಐಜೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಜಾರ್ಜ್ ಪ್ರಕಾಶ್ ನೇತೃತ್ವದ ತಂಡ ಸೋಮವಾರ ಬಂಧಿಸಿದೆ. ಕೋರ್ಟ್ ಬಳಿಯೇ ಅಪರಾಧ ಕೃತ್ಯ ನಡೆಯುವುದನ್ನು ತಪ್ಪಿಸಿದೆ.

ಘಟನೆಗೆ ಸಂಬಂಧಿಸಿದಂತೆ ರಾಮನಗರದ ಗೀತಮಂದಿರ ಬಡಾವಣೆಯ ಉದಯ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೌಡಿಶೀಟರ್‌ಗಳಾದ ರಾಮನಗರ ತಾಲ್ಲೂಕಿನ ಜಾಲಮಂಗಲದ ಅಭಿಷೇಕ್ ಗೌಡ, ತಡಿಕವಾಗಿಲು ಗ್ರಾಮದ ಮಿಥುನ್, ಶಾನುಭೋಗನಹಳ್ಳಿಯ ಅಜಯ್ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ರೌಡಿ ಶೀಟರ್‌ಗಳಾದ ಅಭಿಷೇಕ್ ಗೌಡ ಮತ್ತು ಅಭಿಷೇಕ್‌ನನ್ನು ಬಂಧಿಸಿದ್ದಾರೆ.

ADVERTISEMENT

ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಉದಯ್ ಕುಮಾರ್ ವಿರುದ್ಧ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಹಾರೋಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿತ್ತು. ಅದರ ವಿಚಾರಣೆಗಾಗಿ ಬೆಳಿಗ್ಗೆ 10.40ರ ಸುಮಾರಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಲಯಕ್ಕೆ ಸ್ನೇಹಿತ ಅರುಣ್ ಜೊತೆ ಬಂದಿದ್ದ.

ಬಿ.ಎಂ. ರಸ್ತೆ ಕಡೆಯಿಂದ ಇರುವ ಕೋರ್ಟ್ ಪ್ರವೇಶದ್ವಾರದ ಕಮಾನು ಬಳಿ ನಡೆದುಕೊಂಡು ಹೋಗುತ್ತಿದ್ದ ಉದಯ್‌ನನ್ನು ಅಭಿಷೇಕ್ ಗೌಡ ಮತ್ತು ಆತನ ಸಹಚರರು ಅಡ್ಡಗಟ್ಟಿದರು. ‘ಏನೊ ನನ್ನ ಬಗ್ಗೆ ಏನೇನೊ ಮಾತನಾಡುತ್ತೀಯಾ’ ಎಂದು ಕೆಟ್ಟದಾಗಿ ನಿಂದಿಸಿದರು. ಅದಕ್ಕೆ ಉದಯ್, ‘ನಾನೇನು ಮಾತನಾಡಿಲ್ಲ. ಕೋರ್ಟ್ ಇದೆ ಹೋಗಿ ಬರುತ್ತೇನೆ’ ಎಂದು ಹೋಗಲು ಮುಂದಾದ ಎಂದು ಪೊಲೀಸರು ತಿಳಿಸಿದರು.

ಕಾರಲ್ಲಿತ್ತು ಲಾಂಗ್‌!: ಆಗ ಪಕ್ಕದಲ್ಲಿದ್ದ ತನ್ನ ಥಾರ್ ಜೀಪಿನ ಡೋರ್ ತೆಗೆದ ಅಭಿಷೇಕ್ ಒಳಗಿದ್ದ ಲಾಂಗ್ ಅನ್ನು ಉದಯ್‌ಗೆ ತೋರಿಸುತ್ತಾ, ‘ಕೋರ್ಟ್ ಮುಗಿಸಿಕೊಂಡು ಬಾ. ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಕೊಲೆ ಬೆದರಿಕೆ ಹಾಕಿದ. ಆಗ ಜೊತೆಗಿದ್ದ ಅರುಣ್, ಉದಯ್‌ನನ್ನು ಕೂಡಲೇ ಕೋರ್ಟ್‌ ಒಳಕ್ಕೆ ಕರೆದೊಯ್ದ.

ವಿಚಾರಣೆ ಮುಗಿಸಿಕೊಂಡು ಉದಯ್ ಸ್ನೇಹಿತನೊಂದಿಗೆ ಹೊರಬಂದಾಗ, ಆರೋಪಿಗಳು ಕೋರ್ಟ್ ಹೊರಗಡೆ ಕಾಯುತ್ತಿದ್ದದ್ದು ಕಂಡುಬಂತು. ಕೂಡಲೇ ಆತ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ. ತಕ್ಷಣ ಸ್ಥಳಕ್ಕೆ ತೆರಳಿ ಅಭಿಷೇಕ್ ಗೌಡನನ್ನು ಸುತ್ತುವರಿದು ವಶಕ್ಕೆ ಪಡೆಯಲಾಯಿತು.

ಮಿಥುನ್ ಮತ್ತು ಅಜಯ್ ಸ್ಥಳದಿಂದ ಪರಾರಿಯಾದರು. ಕಾರು ಮತ್ತು ಒಳಗಿದ್ದ ಲಾಂಗ್ ವಶಕ್ಕೆ ಪಡೆಯಲಾಯಿತು. ನಂತರ ಉದಯ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಯಿತು ಎಂದು ಪೊಲೀಸರು ಹೇಳಿದರು.

ಎಚ್ಚರಿಕೆ ಕೊಟ್ಟಿದ್ದ: ತನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದ ಉದಯ್‌ ಕುಮಾರ್‌ಗೆ ಕರೆ ಮಾಡಿದ್ದ ಅಭಿಷೇಕ್ ಗೌಡ, ‘ನಿಂದು ಅತಿಯಾಯಿತು. ಹೀಗೆ ಮುಂದುವರಿದರೆ ನಿನ್ನ ಕಥೆ ಮುಗಿಸುವೆ’ ಎಂದು ಎಚ್ಚರಿಕೆ ಕೊಟ್ಟಿದ್ದ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು.

ಅದೇ ವಿಷಯಕ್ಕೆ ಅಭಿಷೇಕ್ ಇಂದು ಉದಯ್‌ ಮೇಲೆ ದಾಳಿ ನಡೆಸಲು ತನ್ನ ಸಹಚರರೊಂದಿಗೆ ಮಾರಕಾಸ್ತ್ರ ಸಮೇತ ಸಜ್ಜಾಗಿ ಬಂದಿದ್ದ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಲವು ರೌಡಿಗಳು ಸಹ ತಮ್ಮ ಪ್ರಕರಣಗಳ ವಿಚಾರಣೆಗಾಗಿ ಕೋಣೆಗೆ ಬಂದಿದ್ದರು.

ಅಭಿಷೇಕ್ ಕೋರ್ಟ್‌ ಬಳಿಯೇ ಉದಯ್‌ಗೆ ಕೊಲೆ ಬೆದರಿಕೆ ಹಾಕಿ ಕಾಯುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ, ಆತನ ಪರವಾಗಿಯೂ ಕೆಲವರು ಸ್ಥಳದಲ್ಲಿ ಜಮಾಯಿಸಿದ್ದರು. ಹೀಗಾಗಿ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ.

2 ಕೊಲೆ ಪ್ರಕರಣದ ಆರೋಪಿ

ಜಾಲಮಂಗಲದ ಅಭಿಷೇಕ್ ಗೌಡ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು 2 ಕೊಲೆ ಪ್ರಕರಣದ ಜೊತೆಗೆ ಇತರ ಕೇಸ್‌ಗಳನ್ನು ಎದುರಿಸುತ್ತಿದ್ದಾನೆ. ಶ್ರೀಕಾಂತ್ ಎಂಬಾತ ಅಭಿಷೇಕ್ ತಂದೆಯನ್ನು ವಡ್ಡರದೊಡ್ಡಿ ಬಳಿ ಕೊಲೆ ಮಾಡಿದ್ದ. ಆಗಿನ್ನೂ ಚಿಕ್ಕವನಾಗಿದ್ದ ಅಭಿಷೇಕ್ ಬಳಿಕ ತನ್ನದೇ ಗುಂಪು ಕಟ್ಟಿಕೊಂಡು ತಂದೆ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದ. ಕೆಲ ವರ್ಷಗಳ ತಂದೆ ಕೊಲೆಯಾದ ಜಾಗದಲ್ಲೇ ಶ್ರೀಕಾಂತ್‌ ಸಹೋದರನನ್ನು ಕೊಲೆ ಮಾಡಿದ್ದ. ಬೆಂಗಳೂರಿನ ರೌಡಿಗಳ ಸಂಪರ್ಕ ಹೊಂದಿರುವ ಅಭಿಷೇಕ್ ವಿರುದ್ದ ಐಜೂರು ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

ಅಭಿಷೇಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.