ADVERTISEMENT

ರಾಮನಗರ: ಮಾವಿನ ಇಳುವರಿ ಭಾರೀ ಕುಸಿತ

ಮಳೆ ಕೊರತೆ, ಬಿರು ಬಿಸಿಲಿಗೆ ಕೈ ಕೊಟ್ಟ ಮಾವು; ಬೆಳೆಗಾರರು ಕಂಗಾಲು

ಓದೇಶ ಸಕಲೇಶಪುರ
Published 27 ಮಾರ್ಚ್ 2024, 4:22 IST
Last Updated 27 ಮಾರ್ಚ್ 2024, 4:22 IST
<div class="paragraphs"><p>ರಾಮನಗರದ ಪಾಲಾಭೋವಿದೊಡ್ಡಿಯಲ್ಲಿ ಬಿಸಿಲಿನ ಹೊಡೆತಕ್ಕೆ ಮಾವಿನಕಾಯಿಗಳು ಉದುರಿರುವುದು (ಎಡಚಿತ್ರ), ರಾಮನಗರ ಹೊರಲವಯದ ಮಾವಿನ ತೋಟದಲ್ಲಿರುವ ಮರದಲ್ಲಿ ಫಸಲು ಕಮ್ಮಿಯಾಗಿರುವುದು</p></div>

ರಾಮನಗರದ ಪಾಲಾಭೋವಿದೊಡ್ಡಿಯಲ್ಲಿ ಬಿಸಿಲಿನ ಹೊಡೆತಕ್ಕೆ ಮಾವಿನಕಾಯಿಗಳು ಉದುರಿರುವುದು (ಎಡಚಿತ್ರ), ರಾಮನಗರ ಹೊರಲವಯದ ಮಾವಿನ ತೋಟದಲ್ಲಿರುವ ಮರದಲ್ಲಿ ಫಸಲು ಕಮ್ಮಿಯಾಗಿರುವುದು

   

ರಾಮನಗರ: ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಮಾವು ಬೆಳೆ ಕೈ ಕೊಟ್ಟಿದೆ. ಹೂ ಬಿಡುವುದರಿಂದ ಹಿಡಿದು ಕಾಯಿಯಾಗುವವರೆಗೆ ಎಲ್ಲವೂ ವಿಳಂಬವಾಗಿರುವುದರಿಂದ ಇಳುವರಿ ತೀವ್ರ ಕುಸಿತ ಕಂಡಿದೆ. ಹಾಗಾಗಿ, ಮಾವಿನ ಹಣ್ಣಿನ ಋತು ಆರಂಭವಾಗಿದ್ದರೂ ಮಾರುಕಟ್ಟೆಯಲ್ಲಿ ಮಾವಿನ ಆರ್ಭಟ ಅಷ್ಟಾಗಿ ಕಾಣುತ್ತಿಲ್ಲ.

ಬಿರುಸಿ ಬಿಸಿಲಿನ ಹೊಡೆತಕ್ಕೆ ಮರಗಳಲ್ಲಿರುವ ಕಾಯಿಗಳು ಉದುರುತ್ತಿದ್ದರೆ, ಮತ್ತೊಂದೆಡೆ ಕೀಟ ಹಾಗೂ ರೋಗಬಾಧೆಯೂ ಕಾಡುತ್ತಿದೆ. ನೀರಾವರಿ ತೋಟಗಳಲ್ಲಷ್ಟೇ ಅಲ್ಪಸ್ವಲ್ಪ ಬೆಳೆ ಉಳಿದಿದ್ದರೆ, ಮಳೆಯಾಶ್ರಿತ ತೋಟಗಳಲ್ಲಿರುವ ಮರಗಳಲ್ಲಿ ಕಾಯಿಗಳನ್ನು ಹುಡುಕಬೇಕಾದ ಸ್ಥಿತಿ ಬಂದಿದೆ.

ADVERTISEMENT

ಏಪ್ರಿಲ್‌ನಲ್ಲಿ ನಿರೀಕ್ಷೆ: ‘ರಾಜ್ಯದಲ್ಲಿ ಮಾವಿನ ಋತು ಶುರುವಾಗುವುದೇ ರಾಮನಗರದಿಂದ. ಮಾರ್ಚ್ ಮೊದಲ ವಾರದಲ್ಲೇ ಮಾರುಕಟ್ಟೆಯಲ್ಲಿ ಮಾವಿನ ದರ್ಬಾರು ಶುರುವಾಗುತ್ತದೆ. ಆದರೆ, ಈ ಸಲ ಅಷ್ಟಾಗಿ ಮಾವಿನ ಅಬ್ಬರವಿಲ್ಲ. ಸ್ವಲ್ಪ ಪ್ರಮಾಣದ ಬೆಳೆಯಷ್ಟೇ ಮಾರುಕಟ್ಟೆಗೆ ಬಂದಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಎಂ.ಎಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬರದಿಂದಾಗಿ ಈ ಸಲ ಫಸಲು ಕೈ ಕೊಟ್ಟಿದೆ. ನವೆಂಬರ್– ಡಿಸೆಂಬರ್ ಅಂತ್ಯದ ಹೊತ್ತಿಗೆ ಹೂ ಬಿಡಬೇಕಿತ್ತು. ಆದರೆ, ಈ ಸಲ ತಡವಾಗಿದೆ. ಅದರಲ್ಲೂ ಶೇ 70ರಷ್ಟು ಮಾತ್ರ ಹೂ ಬಿಟ್ಟಿತ್ತು. ಅದರಲ್ಲಿ ಕಾಯಿ ಕಟ್ಟಿದ್ದು ಶೇ 25–30ರಷ್ಟು ಮಾತ್ರ. ಹೆಚ್ಚಿನ ತಾಪಮಾನಕ್ಕೆ ಕಾಯಿಗಳು ಉದುರುತ್ತಿವೆ’ ಎಂದು ಬೆಳೆಯ ಸ್ಥಿತಿಯನ್ನು ಬಿಚ್ಚಿಟ್ಟರು.

‘ಇಳುವರಿ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಮಾವಿಗೆ ಜಿಗಿ ಹುಳು, ವೈಟ್ ಫ್ಲೈಸ್, ಜೋನಿ, ನುಸಿ ಕೀಟಬಾಧೆ ಹಾಗೂ ಬೂದು ರೋಗ ಕಾಣಿಸಿಕೊಂಡಿದೆ. ರೋಗ ಮತ್ತು ಕೀಟ ನಿಯಂತ್ರಣಕ್ಕೆ ಇಲಾಖೆಯು ಬೆಳೆಗಾರರಿಗೆ ಸಲಹೆ–ಸೂಚನೆ ನೀಡುತ್ತಾ ಬಂದಿದೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಮಾವು ಬೆಳೆಗಾರರಿದ್ದಾರೆ. 26,889 ಹೆಕ್ಟೇರ್ ಪ್ರದೇಶದಲ್ಲಿ ಬಾದಾಮಿ, ಸೆಂದೂರ, ರಸಪುರಿ ಹಾಗೂ ತೋತಾಪುರಿ ಬೆಳೆಯಲಾಗುತ್ತದೆ’ ಎಂದು ತಿಳಿಸಿದರು.

ಸೆಂದೂರ ಕೆ.ಜಿ.ಗೆ ₹45: ‘ಸದ್ಯ ಮಾರುಕಟ್ಟೆಗೆ ಮಾವು ಅತ್ಯಂತ ಕಡಿಮೆ ಬರುತ್ತಿದೆ. ಹೋಲ್‌ಸೇಲ್ ದರ ಸೆಂದೂರಕ್ಕೆ ಕೆ.ಜಿ.ಗೆ ₹45–₹60, ಬಾದಾಮಿ ₹90–₹120, ತೋತಾಪುರಿ ₹30–₹40 ಹಾಗೂ ರಸಪುರಿ ₹60–70ಕ್ಕೆ ಮಾರಾಟವಾಗುತ್ತಿದೆ. ತೋಟಗಳಲ್ಲಿ ಫಸಲು ಇಲ್ಲದಿರುವುದರಿಂದ ರೈತರಿಂದ ಮಾಲು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಮಾಲು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ’ ಎಂದು ವ್ಯಾಪಾರಿ ದೇವರಾಜ್ ಹೇಳಿದರು.

ಮುಂಗಡ ಕೊಟ್ಟವರ ಕೈ ಸುಟ್ಟಿತು

ಮಾವು ಖರೀದಿಗಾಗಿ ಈಗಾಗಲೇ ಬೆಳೆಗಾರರಿಗೆ ಮುಂಗಡ ಹಣ ಕೊಟ್ಟಿರುವ ಸಗಟು ವ್ಯಾಪಾರಿಗಳು ಸಹ ಕೈ ಸುಟ್ಟುಕೊಂಡಿದ್ದಾರೆ. ನಿರೀಕ್ಷಿತ ಬೆಳೆ ಇಲ್ಲದಿರುವುದರಿಂದಾಗಿ ಅತ್ತ ರೈತನನ್ನು ದೂರಲಾಗದೆ, ಇತ್ತ ನಷ್ಟ ತುಂಬಿಕೊಳ್ಳಲು ಅನ್ಯ ಮಾರ್ಗವಿಲ್ಲದೆ ಅತಂತ್ರ ಸ್ಥಿತಿ ತಲುಪಿದ್ದಾರೆ.

‘ಪ್ರತಿ ವರ್ಷ ಆಗಸ್ಟ್–ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಬೆಳೆಗಾರರಿಗೆ ಅರ್ಧ ಮುಂಗಡ ಕೊಡುತ್ತೇವೆ. ಕಡೆಯದಾಗಿ ಜನವರಿಯಲ್ಲಿ ಮಾವಿನತೋಟಕ್ಕೆ ಔಷಧ ಸಿಂಪಡಿಸುವ ಸಂದರ್ಭದಲ್ಲಿ ಉಳಿದರ್ಧ ಹಣ ಕೊಡುತ್ತೇವೆ. ಮಾರ್ಚ್ ಹೊತ್ತಿಗೆ ಫಸಲು ಕೊಯ್ಲು ಶುರುವಾಗುತ್ತದೆ. ಫಸಲು ಮುಗಿಯುವ ಜೂನ್‌ವರೆಗೆ ತೋಟದ ಜವಾವ್ದಾರಿ ನಮ್ಮದಾಗಿರುತ್ತದೆ. ನೀರಾವರಿ ತೋಟಗಳಲ್ಲಿ ಸ್ವಲ್ಪ ಮಾವು ಉಳಿದಿದೆ. ಮಳೆ ನೆಚ್ಚಿಕೊಂಡ ತೋಟಗಳಲ್ಲಿ ಏನೂ ಉಳಿದಿಲ್ಲ. ಲಕ್ಷಾಂತರ ರೂಪಾಯಿ ಕೊಟ್ಟಿರುವ ನಮಗೆ ಬೇರೆ ದಾರಿ ಕಾಣದಾಗಿದೆ’ ಎಂದು ಸಗಟು ವ್ಯಾಪಾರಿ ದೇವರಾಜ್ ಬೇಸರ ತೋಡಿಕೊಂಡರು.

ರಾಮನಗರದ ರೇಷ್ಮೆಗೂಡಿನ ಮಾರುಕಟ್ಟೆಯ ಬಳಿ ವಾಹನದಲ್ಲಿ ಮಾವು ಮಾರಾಟ ಮಾಡುತ್ತಿರುವ ವ್ಯಾಪಾರಿ

ಅಂಕಿ ಅಂಶ...

26,889 ಹೆಕ್ಟೇರ್

ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ

30 ಸಾವಿರ

ಜಿಲ್ಲೆಯಲ್ಲಿರುವ ಮಾವು ಬೆಳೆಗಾರರು

ಅಂದಾಜು ಶೇ 20

ಈ ಸಲ ಬೆಳೆ ಕೈ ಸೇರುವ ಶೇಕಡವಾರು ಪ್ರಮಾಣ

ಮಳೆ ಕೊರತೆ ಹಾಗೂ ತೀವ್ರ ತಾಪಮಾನದಿಂದಾಗಿ ಮಾವು ಕೈ ಕೊಟ್ಟಿದ್ದು, ಇರುವ ಕಾಯಿಗಳು ಉದುರುತ್ತಿವೆ. ಈ ಸಲ ಜಿಲ್ಲೆಯಲ್ಲಿ ಶೇ 18ರಿಂದ ಶೇ 20ರಷ್ಟು ಮಾತ್ರ ಮಾವಿನ ಫಸಲು ನಿರೀಕ್ಷಿಸಲಾಗಿದೆ

-ರಾಜು ಎಂ.ಎಸ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ

****

ಈ ಸಲ ಮಾವಿನ ಬೆಳೆ ಇಷ್ಟೊಂದು ಪ್ರಮಾಣದಲ್ಲಿ ನಷ್ಟವಾಗಿರುವುದನ್ನು ಹಿಂದೆಂದೂ ಕಂಡಿಲ್ಲ. ಮಳೆ–ಬೆಳೆ ಇಲ್ಲದೆ ಕಂಗಲಾಗಿರುವ ರೈತರಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು

-ಆರ್. ಚಿಕ್ಕಬೈರೇಗೌಡ,ಅಧ್ಯಕ್ಷ, ರಾಮನಗರ ಜಿಲ್ಲೆ ಮಾವು ಬೆಳೆಗಾರರ ಸಂಘ

****

ಪ್ರಕೃತಿ ಕಾರಣದಿಂದಾಗಿ ಮಾವು ಶೇ 50ರಷ್ಟು ಕೈ ಕೊಟ್ಟಿದ್ದರೆ, ಉಳಿದದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗಿದೆ. ಔಷಧ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಧಿಕಾರಿಗಳು ಕೀಟನಾಶಕ ಕಂಪನಿಗಳೊಂದಿಗೆ ಶಾಮೀಲಾಗಿದ್ದಾರೆ

-ಬಿಳಗುಂಬ ವಾಸು, ಮಾವು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.