ADVERTISEMENT

ಕುದೂರು | ಭಾರತ್ ಗ್ಯಾಸ್ ಕಾರ್ಖಾನೆ ಬಳಿ ಸಿಬ್ಬಂದಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 6:10 IST
Last Updated 11 ಸೆಪ್ಟೆಂಬರ್ 2024, 6:10 IST
ಸೋಲೂರಿನ ಭಾರತ್ ಪೆಟ್ರೋಲಿಯಂ ಕಂಪನಿ ಬಳಿ ಸೋಮವಾರ ನಡೆದ ಕಾರ್ಮಿಕರ ಪ್ರತಿಭಟನೆಗೆ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಬೆಂಬಲ ಸೂಚಿಸಿದರು.   
ಸೋಲೂರಿನ ಭಾರತ್ ಪೆಟ್ರೋಲಿಯಂ ಕಂಪನಿ ಬಳಿ ಸೋಮವಾರ ನಡೆದ ಕಾರ್ಮಿಕರ ಪ್ರತಿಭಟನೆಗೆ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಬೆಂಬಲ ಸೂಚಿಸಿದರು.      

ಕುದೂರು: ಸೋಲೂರಿನ ಭಾರತ್ ಪೆಟ್ರೋಲಿಯಂ ಗ್ಯಾಸ್ ಫಿಲ್ಲಿಂಗ್ ಘಟಕದ ಗುತ್ತಿಗೆ ನೌಕರರು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಘಟಕದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರು ವಾಹನಗಳನ್ನು ಒಳಗೆ ಬಿಡದ ಕಾರಣ ನಾನಾ ಜಿಲ್ಲೆಗಳಿಂದ ಬಂದ 200ಕ್ಕೂ ಹೆಚ್ಚು ಗ್ಯಾಸ್ ಲಾರಿಗಳು ಸರ್ವಿಸ್ ರಸ್ತೆಯಲ್ಲಿಯೇ ನಿಂತಿದ್ದವು.  

ಕಂಪನಿಯಲ್ಲಿ ಕೆಲಸ ಮಾಡುವ 27 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಲಾರಿಗೆ ಸಿಲಿಂಡರ್ ತುಂಬುವ ಕಾರ್ಮಿಕರಿಗೆ ದಿನಕ್ಕೆ ₹350, ಇನ್ನೂ ಕೆಲವರಿಗೆ ₹700 ವೇತನ ನೀಡಲಾಗುತ್ತಿದೆ. ಪಿಎಫ್, ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯ ನೀಡಿಲ್ಲ. ಕಂಪನಿಗೆ ಜಮೀನು ನೀಡಿ ಕೆಲಸ ಮಾಡುವ ಕಾರ್ಮಿಕರಿಗೂ ತಾರತಮ್ಯ ಮಾಡುತ್ತಿದ್ದು, ಪ್ರಶ್ನೆ ಮಾಡಿದರೆ ಕಾರ್ಮಿಕರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಪ್ರತಿಭಟನನಿರತ ಕಾರ್ಮಿಕರು ಆರೋಪಿಸಿದರು.

ADVERTISEMENT

ಶಾಸಕರ ಭೇಟಿ: ಕಾರ್ಮಿಕರ ಸಮಸ್ಯೆಯನ್ನು ಮನಗಂಡ ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಶ್ರೀನಿವಾಸ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದರು. ಕಂಪನಿ ಮುಖ್ಯಸ್ಥರಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿದರು.

ಕೆಲಸದಿಂದ ತೆಗೆದು ಹಾಕಿದ 27 ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಕಾರ್ಮಿಕರ ಸಂಬಳ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ಹತ್ತು ದಿನಗಳಲ್ಲಿ ಬಗೆಹರಿಸಬೇಕು ಎಂದು ಶಾಸಕರು ಕಂಪನಿ ಆಡಳಿತ ಮಂಡಳಿಗೆ ತಿಳಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರಲ್ಲಿ ಹೊರ ರಾಜ್ಯದವರೇ ಹೆಚ್ಚಾಗಿ ಭಾರತ್ ಪೆಟ್ರೋಲಿಯಂ ಗ್ಯಾಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಲೇಬರ್ ಕಾಂಟ್ರಾಕ್ಟರ್‌ಗಳು ಕನ್ನಡಿಗರಿಗೆ ಮೋಸ ಮಾಡಿ ಹೊರ ರಾಜ್ಯದ ನೌಕರರನ್ನೇ ಕರೆತಂದು ಸೇರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಗಡಿ ಡಿವೈಎಸ್ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದರು.  ಕಂಪನಿ ಬಳಿ ಬಿಗಿಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.  

ಸೋಲೂರಿನ ಭಾರತ್ ಪೆಟ್ರೋಲಿಯಂ ಕಂಪನಿ ಬಳಿ ಸೋಮವಾರ ನಡೆದ ಕಾರ್ಮಿಕರ ಪ್ರತಿಭಟನೆಗೆ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಬೆಂಬಲ ಸೂಚಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.