ರಾಮನಗರ: ನಗರದ ವಿವಿಧೆಡೆ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಬೇಕಾಬಿಟ್ಟಿಯಾಗಿ ನಡೆಯುತ್ತಿವೆ. ಗುಣಮಟ್ಟದ ಕಾಯ್ದುಕೊಳ್ಳುತ್ತಿಲ್ಲ. ಹಲವೆಡೆ ಕಾಮಗಾರಿ ತುಂಬಾ ವಿಳಂಬವಾಗುತ್ತಿದೆ. ಇದರಿಂದಾಗಿ, ನಗರದ ಕೆಲ ರಸ್ತೆಗಳಲ್ಲಿ ಓಡಾಡಲಾಗದ ಸ್ಥಿತಿ ಇದೆ. ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಗರಸಭೆ ಸದಸ್ಯರು ದೂರಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ 2025-26ನೇ ಸಾಲಿನ ಕ್ರಿಯಾಯೋಜನೆಗಳಿಗೆ ಅನುಮೋದನೆ ಪಡೆಯುವುದಕ್ಕಾಗಿ ಇತ್ತೀಚೆಗೆ ಆಯೋಜಿಸಿದ್ದ ತುರ್ತು ವಿಶೇಷ ಸಭೆಯಲ್ಲಿ ಮಾತನಾಡಿದ ಕೆಲ ಸದಸ್ಯರು, ರಸ್ತೆ ಕಾಮಗಾರಿಗಳ ಕುರಿತು ಬೇಸರ ವ್ಯಕ್ತಪಡಿಸಿದರು. ಅದಕ್ಕೆ ಉಳಿದವರು ಸಹ ದನಿಗೂಡಿಸಿದರು.
ಜೆಡಿಎಸ್ ಸದಸ್ಯ ಮಂಜುನಾಥ್ ಮಾತನಾಡಿ, ರಾಮದೇವರ ರಥೋತ್ಸವ ಪ್ರಯುಕ್ತ ರಥ ಸಾಗುವ ಮಾರ್ಗದಲ್ಲಿ ಅಧ್ಯಕ್ಷರು ರಸ್ತೆ ನಿರ್ಮಿಸಿ ರಥೋತ್ಸವ ಸುಸೂತ್ರವಾಗಿ ನಡೆಯುವಂತೆ ಮಾಡಿರುವುದಕ್ಕೆ ಅಭಿನಂದನೆಗಳು. ಆದರೆ, ರಥೋತ್ಸವ ಮುಗಿದ ಬಳಿಕ ಹಲವೆಡೆ ಕಾಮಗರಿ ವಿಳಂಬವಾಗುತ್ತಿದೆ. ಮಳೆಗಾಲಕ್ಕೆ ಮುಂಚೆ ಕೆಲಸ ಮುಗಿದರೆ ಜನ ಪರದಾಡುವುದು ತಪ್ಪುತ್ತದೆ ಎಂದರು.
ಕಾಂಗ್ರೆಸ್ ಸದಸ್ಯ ಸೋಮಶೇಖರ್, ರಸ್ತೆ ಕಾಮಗಾರಿ ಗುತ್ತೆಗೆ ಪಡೆದಿರವವರು ಉಪ ಗುತ್ತಿಗೆ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕಾಮಗಾರಿ ಸರಿಯಾಗಿ ನಡೆಯುತ್ತಿತ್ತಿಲ್ಲ. ಗುತ್ತಿಗೆ ಪಡೆದವರೇ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಮಾಡಲು ಅಧ್ಯಕ್ಷರು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಮತ್ತೊಬ್ಬ ಸದಸ್ಯ ನಿಜಾಮುದ್ದೀನ್ ಷರೀಶ್, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 14ನೇ ವಾರ್ಡಿನಲ್ಲಿ ಯುಡಿಐಎಫ್ ಅಡಿಯಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ದೂರಿದರು.
ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಸಂಬಂಧಪಟ್ಟ ಎಂಜಿನಿಯರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗುಣಮಟ್ಟ ಸೇರಿದಂತೆ ಕಾಮಗಾರಿಯಲ್ಲಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು. ಪರಿಶೀಲನೆ ನಡೆಸಬೇಕು ಕಾಮಗಾರಿಯಲ್ಲಿ ಎಲ್ಲೂ ಲೋಪದೋಷ ಆಗಬಾರದೆಂದು ಸೂಚನೆ ನೀಡಿದರು.
15ನೇ ಹಣಕಾಸು ಯೋಜನೆಯ ಅನುದಾನವನ್ನು ಎಲ್ಲಾ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡಿದ್ದಕ್ಕೆ ಅಧ್ಯಕ್ಷರಿಗೆ ಎಲ್ಲರೂ ಅಭಿನಂದಿಸಿದರು. ಉಪಾಧ್ಯಕ್ಷೆ ಆಯೇಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷಾ, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಬಿ.ಸಿ. ಪಾರ್ವತಮ್ಮ, ಮಂಜುನಾಥ್, ಪವಿತ್ರ, ವಿಜಯಕುಮಾರಿ, ಗಿರಿಜಮ್ಮ, ಬೈರೇಗೌಡ, ಸಮದ್, ರಮೇಶ್, ಮಂಜುಳಾ, ಮಹಾಲಕ್ಷ್ಮಿ, ಅಸ್ಮತ್‌ಉಲ್ಲಾ ಖಾನ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಮೇ 11ಕ್ಕೆ ಅದ್ದೂರಿ ಅಂಬೇಡ್ಕರ್ ಜಯಂತಿ
ನಗರಸಭೆ ವತಿಯಿಂದ ಮೇ 11ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು. ಅದಕ್ಕಾಗಿಯೇ ಬಜೆಟ್‌ನಲ್ಲಿ ₹5 ಲಕ್ಷ ಮೀಸಲಿರಿಸಲಾಗಿದೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಸಂಸದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಸಹ ಆಹ್ವಾನಿಸಲಾಗುವುದು. ಪಕ್ಷಬೇಧ ಮರೆತು ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಬೇಕು. ಕಾರ್ಯಕ್ರಮ ರೂಪುರೇಷೆ ಕುರಿತು ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು. ಅದಕ್ಕೆ ಕೆಲ ಸದಸ್ಯರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 895ನೇ ರ‍್ಯಾಂಕ್ ಪಡೆದ ವಿಜಯನಗರದ ಅಜಯ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ನಗರಸಭೆ ವತಿಯಿಂದ ಸನ್ಮಾನಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷರು ಸಹಮತ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.