ADVERTISEMENT

ರಾಮನಗರ | ರಜೆಯಲ್ಲೂ ಶಾಲಾ ದಾಖಲಾತಿ ಆಂದೋಲನ

ರಾಮನಗರದ ಸರ್ಕಾರಿ ಶಿಕ್ಷಕರ ಮಾದರಿ ನಡೆ; 730ಕ್ಕೂ ಹೆಚ್ಚು ಮಕ್ಕಳು ದಾಖಲು

ಓದೇಶ ಸಕಲೇಶಪುರ
Published 7 ಮೇ 2025, 5:11 IST
Last Updated 7 ಮೇ 2025, 5:11 IST
ರಾಮನಗರ ತಾಲ್ಲೂಕಿನ ಬೆತ್ತಂಗೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರ ನೇತೃತ್ವದಲ್ಲಿ ವಿಶೇಷ ದಾಖಲಾತಿ ಆಂದೋಲನ ನಡೆಯಿತು. ಬನ್ನಿಕುಪ್ಪೆ ‘ಬಿ’ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಟಿ.ಎನ್. ಚಿಕ್ಕವೀರಯ್ಯ ಇದ್ದಾರೆ
ರಾಮನಗರ ತಾಲ್ಲೂಕಿನ ಬೆತ್ತಂಗೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರ ನೇತೃತ್ವದಲ್ಲಿ ವಿಶೇಷ ದಾಖಲಾತಿ ಆಂದೋಲನ ನಡೆಯಿತು. ಬನ್ನಿಕುಪ್ಪೆ ‘ಬಿ’ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಟಿ.ಎನ್. ಚಿಕ್ಕವೀರಯ್ಯ ಇದ್ದಾರೆ   

ರಾಮನಗರ: ಬೇಸಿಗೆ ರಜೆ ಬಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಂಭ್ರಮವಾದರೆ, ಶಿಕ್ಷಕರಿಗೂ ಒಂದು ರೀತಿಯಲ್ಲಿ ವಿಶ್ರಾಂತಿ ಸಮಯ. ಆದರೆ, ತಾಲ್ಲೂಕಿನ ಸರ್ಕಾರಿ ಶಾಲೆಗಳ ಶಿಕ್ಷಕರು ರಜೆ ಎಂದು ಮನೆಯಲ್ಲಿ ಕೂರದೆ, ಹಳ್ಳಿಗಳಲ್ಲಿ ಮಕ್ಕಳ ದಾಖಲಾತಿ ಆಂದೋಲನ ಕೈಗೊಂಡಿದ್ದಾರೆ. ಇದುವರೆಗೆ 1ನೇ ತರಗತಿಗೆ 730ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿರುವ 22 ಕ್ಲಸ್ಟರ್‌ಗಳಲ್ಲಿರುವ 152 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು 91 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂದೋಲನ ನಡೆಯುತ್ತಿದೆ. ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚುವ ಶಿಕ್ಷಕರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಓದುವುದರಿಂದ ಆಗುವ ಪ್ರಯೋಜನಗಳ ಕುರಿತು ಪೋಷಕರ ಮನವೊಲಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಒಲವು ತೋರುತ್ತಿದ್ದಾರೆ.

ರಜೆಗೆ ಮುಂಚೆಯೇ ಶುರು: ‘ಬೇಸಿಗೆ ರಜೆ ಏ. 10ಕ್ಕೆ ಶುರುವಾಗುವುದಕ್ಕೆ ಎರಡು ದಿನ ಮುಂಚೆ ತಾಲ್ಲೂಕಿನ ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಲಾಯಿತು. ಖಾಸಗಿ ಶಾಲೆಗಳು ಹಳ್ಳಿ ಪ್ರವೇಶಿಸುವುದಕ್ಕೆ ಮೊದಲೇ ಗ್ರಾಮಮಟ್ಟದಲ್ಲಿ ನಾವು ವಿಶೇಷ ದಾಖಲಾತಿ ಆಂದೋಲನ ಮಾಡುವ ಕುರಿತು ಮನವರಿಕೆ ಮಾಡಿಕೊಡಲಾಯಿತು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತಾಲ್ಲೂಕಿನಲ್ಲಿರುವ ಅಂಗನವಾಡಿಗಳಿಂದ ಮಕ್ಕಳ ಮಾಹಿತಿ ಸಂಗ್ರಹಿಸಿ ಕೈಗೊಂಡ ಆಂದೋಲನದಿಂದಾಗಿ ನಮ್ಮ ಶಾಲೆಗಳಿಗೆ 1ನೇ ತರಗತಿಗೆ ಇದುವರೆಗೆ 730ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಇದಕ್ಕೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ನಮಗೆ ಕರಪತ್ರ, ದಾಖಲಾತಿ ಫಾರಂ ಸೇರಿದಂತೆ ಕೆಲ ಸಾಮಗ್ರಿ ಒದಗಿಸಿ ನೆರವಾಯಿತು’ ಎಂದು ಹೇಳಿದರು.

1,500 ಗುರಿ: ‘2024ರಲ್ಲಿ ತಾಲ್ಲೂಕಿನಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ (1ರಿಂದ 5ನೇ ತರಗತಿ) 7,767 ಮಕ್ಕಳಿದ್ದರು. ಆ ಪೈಕಿ, 1ನೇ ತರಗತಿಯಲ್ಲಿ 1,166 ವಿದ್ಯಾರ್ಥಿಗಳಿದ್ದರು. ವಿಶೇಷ ದಾಖಲಾತಿ ಆಂದೋಲನದ ಮೂಲಕ ಈ ಸಾಲಿನಲ್ಲಿ ದಾಖಲಾತಿಯನ್ನು 1,500ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ’ ಎಂದು ಸೋಮಲಿಂಗಯ್ಯ ತಿಳಿಸಿದರು.

‘ಸಾಮಾನ್ಯವಾಗಿ ಬೇಸಿಗೆ ರಜೆ ಮುಗಿದ ಬಳಿಕ ಜೂನ್‌ ಆರಂಭದಲ್ಲಿ ಮಕ್ಕಳ ದಾಖಲಾತಿ ಆಂದೋಲನ ನಡೆಯುತ್ತದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿಸಲು ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ವಿಶೇಷ ಆಂದೋಲನ ನಡೆಯುತ್ತಿದೆ. ನಮ್ಮ ಶಾಲೆಗಳಲ್ಲಿನ ಬಹು ಸೌಲಭ್ಯಗಳ ಕುರಿತು ಪೋಷಕರಿಗೆ ಮನವರಿಕೆ ಮಾಡಿಕೊಡುತ್ತಾ ಅವರನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುತ್ತಿದ್ದೇವೆ’ ಎಂದು ತಾಲ್ಲೂಕಿನ ಬನ್ನಿಕುಪ್ಪೆ ‘ಬಿ’ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಟಿ.ಎನ್. ಚಿಕ್ಕವೀರಯ್ಯ ಎಂದು ಹೇಳಿದರು.

ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
ಆಂದೋಲನದ ಸಲುವಾಗಿ ಮುದ್ರಿಸಿರುವ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತ ಕರಪತ್ರ 

ಅಂಕಿಅಂಶ–1269ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಗಳು152ಕಿರಿಯ ಪ್ರಾಥಮಿಕ ಶಾಲೆಗಳು91ಹಿರಿಯ ಪ್ರಾಥಮಿಕ ಶಾಲೆಗಳು29ಪ್ರೌಢಶಾಲೆಗಳು ಅಂಕಿಅಂಶ–213,314ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು7,767ಕಿ.ಪ್ರಾ. ಶಾಲೆ ಮಕ್ಕಳು2,745ಹಿ.ಪ್ರಾ. ಶಾಲೆ ಮಕ್ಕಳು3,736ಪ್ರೌಢಶಾಲೆ ಮಕ್ಕಳು

ಬೇಸಿಗೆ ರಜೆ ಶುರುವಾಗುವುದಕ್ಕೆ ಎರಡು ದಿನ ಮುಂಚಿನಿಂದಲೇ ವಿಶೇಷ ಶಾಲಾ ದಾಖಲಾತಿ ಆಂದೋಲನ ಪ್ರಾರಂಭಿಸಿದೆವು. ಮನೆ ಮನೆ ಭೇಟಿ ಸಂದರ್ಭದಲ್ಲೇ ದಾಖಲಾತಿ ಫಾರಂ ಕೊಟ್ಟು ಶಾಲೆಗೆ ಸೇರಿಸಿಕೊಳ್ಳಲಾಗುತ್ತಿದೆ
ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
ಸರ್ಕಾರಿ ಶಾಲೆ ಶಿಕ್ಷಣವು ಕಲಿಕೆ ಕಾಳಜಿ ಬೆಂಬಲ ಎಂಬ ಮೂಲತತ್ವಗಳನ್ನು ಆಧರಿಸಿದೆ. ತಾಲ್ಲೂಕಿನಲ್ಲಿ ಆರಂಭಿಸಿರುವ ವಿಶೇಷ ದಾಖಲಾತಿ ಆಂದೋಲನದಿಂದ ಸರ್ಕಾರಿ ಶಾಲೆಗಳು ಮತ್ತಷ್ಟು ಸಬಲೀಕರಣ ಆಗಲಿವೆ
ಟಿ.ಎನ್. ಚಿಕ್ಕವೀರಯ್ಯ ಸಿಆರ್‌ಪಿ ಬನ್ನಿಕುಪ್ಪೆ ‘ಬಿ’ ಕ್ಲಸ್ಟರ್ ರಾಮನಗರ ತಾಲ್ಲೂಕು

ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳು

* ಉಚಿತವಾಗಿ ಪ್ರವೇಶದೊಂದಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ* ವಾರವಿಡೀ ಬಿಸಿಯೂಟ ಹಾಲು ಮತ್ತು ಮೊಟ್ಟೆ ವಿತರಣೆ* ಮಕ್ಕಳು ಶಾಲೆಗೆ ಬಂದು ಹೋಗಲು ಸೈಕಲ್ ವಿತರಣೆ* ಶಿಕ್ಷಣಕ್ಕೆ ಆರ್ಥಿಕವಾಗಿ ನೆರವಾಗಲು ವಿದ್ಯಾರ್ಥಿವೇತನ* 1ನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ* ಡಿಜಿಟಲ್ ಕಲಿಕಾ ಕೇಂದ್ರ ಸುಸಜ್ಜಿತ ಗ್ರಂಥಾಲಯ* ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪ್ಯಾಡ್ ವಿತರಣೆ* ವರ್ಷಕ್ಕೊಮ್ಮೆ ಉಚಿತವಾಗಿ ಶೈಕ್ಷಣಿಕ ಪ್ರವಾಸ* ಪ್ರತಿಭಾ ಕಾರಂಜಿ ಮೂಲಕ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗೆ ಉತ್ತೇಜನ* ನುರಿತ ತರಬೇತಿ ಹೊಂದಿದ ಶಿಕ್ಷಕರು* ಗುಣಮಟ್ಟದ ಶಿಕ್ಷಣ ಮುಕ್ತ ಕಲಿಕಾ ವಾತವರಣ* ರೇಡಿಯೊ ಪಾಠ ಟಿ.ವಿ ಆಧಾರಿತ ಪಾಠ* ಕಲಿಕಾ ಸವಾಲುಳ್ಳವರಿಗೆ ಪರಿಹಾರ ಬೋಧನೆ* ಕಲಿಕಾ ಸಾಮಗ್ರಿಗಳ ಕಿಟ್ ಮೂಲಕ ಬೋಧನೆ* ಸಮಗ್ರ ಮತ್ತು ನಿರಂತರ ಮೌಲ್ಯಮಾಪನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.