ರಾಮನಗರ: ‘ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಇದುವರೆಗೆ ಶೇ 63.45ರಷ್ಟು ಪೂರ್ಣಗೊಂಡಿದ್ದು, ಸಮೀಕ್ಷೆ ಉತ್ತಮ ಪ್ರಗತಿಯಲ್ಲಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಏನಾದರೂ ಸಮಸ್ಯೆಗಳು ಎದುರಾದರೆ ತಕ್ಷಣ ಆಯೋಗದ ಗಮನಕ್ಕೆ ತರಬೇಕು’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜೆ.ಎನ್. ಶ್ರೀಕಂಠಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಸಮೀಕ್ಷಾ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 3,45,883 ಜಿಯೋ ಟ್ಯಾಗ್ ಮಾಡಿರುವ ಮನೆಗಳಿವೆ. ಅದರಲ್ಲಿ 3,164 ಗಣತಿ ಬ್ಲಾಕ್‌ಗಳನ್ನು ರಚಿಸಲಾಗಿದ್ದು, 3,149 ಸಮೀಕ್ಷೆದಾರರನ್ನು ನಿಯೋಜಿಸಲಾಗಿದೆ’ ಎಂದರು.
‘ಸಮೀಕ್ಷೆದಾರರು ಹಾಗೂ ಮೇಲ್ವಿಚಾರಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಶ್ರಮದಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಶೇ 63.45ರಷ್ಟು ಸಮೀಕ್ಷೆ ಪೂರ್ಣಗೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ವೇಗವಾಗಿ ಸಾಗುತ್ತಿರುವ ಸಮೀಕ್ಷೆಯನ್ನು ಇದೇ ರೀತಿ ಮುಂದುವರೆಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿ, ‘ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿದಿನದ ಪ್ರಗತಿಯನ್ನು ನಿಯಮಿತವಾಗಿ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಆನ್‌ಲೈನ್ ಸಭೆಗಳನ್ನು ನಡೆಸಲಾಗುತ್ತಿದೆ. ಸ್ಥಳದಲ್ಲಿ ಏನೇ ಗೊಂದಲಗಳು, ತಾಂತ್ರಿಕ ತೊಂದರೆಗಳು ಎದುರಾದರೆ, ತಕ್ಷಣ ಅವರಿಗೆ ಪರಿಹಾರೋಪಾಯ ಸೂಚಿಸಿ ಸಮೀಕ್ಷೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್ ಎಂ.ಜಿ ಮಾತನಾಡಿ, ‘ಪ್ರತಿ 20 ಸಮೀಕ್ಷೆದಾರರಿಗೆ ಒಬ್ಬರಂತೆ ಜಿಲ್ಲೆಯಲ್ಲಿ 164 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರತಿ 9ರಿಂದ 10 ಮೇಲ್ವಿಚಾರಿಗೆ ಒಬ್ಬರಂತೆ 20 ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ವ್ಯವಸ್ಥಿತವಾಗಿ, ಸಾಕಷ್ಟು ವೇಗವಾಗಿ ಸಮೀಕ್ಷೆ ಕಾರ್ಯ ನಿರ್ವಹಿಸಲು ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಬಿನೋಯ್ ಅವರು, ಸಮೀಕ್ಷಾ ಕಾರ್ಯದಲ್ಲಿ ಎದುರಾದ ಕೆಲ ಸವಾಲುಗಳನ್ನು ಸದಸ್ಯರ ಗಮನಕ್ಕೆ ತಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸ್ವಾಮಿ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.
ಅಂಕಿಅಂಶ... 3,45,883ಸಮೀಕ್ಷೆಗಾಗಿ ಜಿಲ್ಲೆಯಲ್ಲಿ ಜಿಯೋ ಟ್ಯಾಗ್ ಮಾಡಿರುವ ಮನೆಗಳು3,164 ಸಮೀಕ್ಷೆಗಾಗಿ ಗುರುತಿಸಿರುವ ಬ್ಲಾಕ್‌ಗಳು3,149 ಸಮೀಕ್ಷೆಗೆ ನೇಮಕಗೊಂಡಿರುವವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.