ರಾಮನಗರ: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ಜುಲೈ 5ರಿಂದ 11ರವರೆಗೆ ನಡೆಯಲಿದೆ. 5ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಪ್ರಥಮ ಭಾಷೆ, 7ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ವಿಜ್ಞಾನ, 8ರಂದು ಬೆಳಗ್ಗೆ 10ರಿಂದ 1 ಗಂಟೆಯವರೆಗೆ ದ್ವಿತೀಯ ಭಾಷೆ, 9ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಗಣಿತ, 10ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೃತೀಯ ಭಾಷೆ ಹಾಗೂ 11ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ.
ಜಿಲ್ಲೆಯಲ್ಲಿ 8 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅಂತಿಮಗೊಳಿಸಲಾಗಿದೆ. ಈ ಪೈಕಿ ಚನ್ನಪಟ್ಟಣದಲ್ಲಿ 2, ಕನಕಪುರ 3, ಮಾಗಡಿ 1 ಹಾಗೂ ರಾಮನಗರ 2 ಕೇಂದ್ರಗಳಿವೆ. ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ಕೇಂದ್ರದ ಸಿಸಿಟಿವಿ ವೀಕ್ಷಣೆಗೆ ಜಿಲ್ಲಾ ಪಂಚಾಯಿತಿ ಭವನದಲ್ಲಿ ನಿಯಂತ್ರಣ ಕೊಠಡಿ ಮೂಲಕ ವೆಬ್‌ಕ್ಯಾಸ್ಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಕೇಂದ್ರದಲ್ಲಿ ಯುಪಿಎಸ್ ಸೌಲಭ್ಯ ಕಲ್ಪಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮತ್ತು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಎಲ್ಲಾ ಶಾಲೆಗಳಲ್ಲಿ ಪ್ರಸ್ತುತ ವರ್ಷ ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಗೂ ತಾನು ಪರೀಕ್ಷೆ ಬರೆಯುವ ಕೇಂದ್ರದ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಮೂಲಕ ಮಾಹಿತಿ ನೀಡಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆ, ಪ್ರತಿ ಕೊಠಡಿಗೆ ಗಾಳಿ ಬೆಳಕಿನ ವ್ಯವಸ್ಥೆ, ಎಲ್ಲಾ ವಿದ್ಯಾರ್ಥಿಗಳಿಗೂ ಆಸನದ ವ್ಯವಸ್ಥೆ ಹಾಗೂ ಅಗತ್ಯವಾಗಿ ಇರಬೇಕಾದ ಮೂಲಸೌಲಭ್ಯಗಳನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಲು ಜಿಲ್ಲಾ ಹಂತದಲ್ಲಿ ದ್ವಿಸದಸ್ಯ ತಂಡವನ್ನು ರಚಿಸಿ ಚೆಕ್‌ಲಿಸ್ಟ್ ನೀಡಲಾಗಿದೆ. ತಂಡದವರು ಖುದ್ದು ಭೇಟಿ ನೀಡಿ ಮಾಹಿತಿ ಕ್ರೋಢೀಕರಿಸಿರುತ್ತಾರೆ.
ಪ್ರತಿ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಾಲ್ಲೂಕು ಹಂತದಲ್ಲಿ ವಿಚಕ್ಷಣಾ ದಳ ರಚಿಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವಂತೆ ಕ್ರಮ ವಹಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಸ್ಥಾನಿಕ ಜಾಗೃತ ದಳದ ಸದಸ್ಯರನ್ನು ರೊಟೇಷನ್ ಆಧಾರದಲ್ಲಿ ನೇಮಿಸಲಾಗಿದೆ.
ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು, ಕಸ್ಟೋಡಿಯನ್, ಜಾಗೃತದಳ, ಮೊಬೈಲ್ ಕಸ್ಟೋಡಿಯನ್ ಹಾಗೂ ಸಿಬ್ಬಂದಿಗೆ ಒಂದು ದಿನದ ತರಬೇತಿಯನ್ನು ಆಯೋಜಿಸಿ, ಪರೀಕ್ಷಾ ಪಾವಿತ್ರ‍್ಯತೆ ಕುರಿತು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.
ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಪರೀಕ್ಷಾ ಅವಧಿಯಲ್ಲಿ ಒಂದು ಸುಸಜ್ಜಿತ 108 ಆಂಬ್ಬುಲೆನ್ಸ್ ಕಾಯ್ದಿರಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ಸೂಕ್ತ ಚಿಕಿತ್ಸಾ ಸಾಮಗ್ರಿಗಳೊಂದಿಗೆ ನಿಯೋಜಿಸಲಾಗಿದೆ. ಒಆರ್‌ಎಸ್‌ನಂತಹ ತುರ್ತು ಚಿಕಿತ್ಸಾ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಬಂದೋಬಸ್ತ್‌ಗಾಗಿ ಇಬ್ಬರು ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಲಾಗಿದೆ. ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಕೇಂದ್ರದ ಸುತ್ತ ಇರುವ ಜೆರಾಕ್ಸ್ ಅಂಗಡಿ ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚಲು ಜಿಲ್ಲಾಡಳಿತದಿಂದ ಆದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.