ರಾಮನಗರ: ಪಡಿತರ ಚೀಟಿ ತಿದ್ದುಪಡಿಗೆ ಜಿಲ್ಲೆಯಲ್ಲಿ ಅವಕಾಶ ನೀಡಿದ್ದರೂ, ತಿದ್ದುಪಡಿ ಕಾರ್ಯ ನಡೆಯುವ ಗ್ರಾಮ ಒನ್ ಕೇಂದ್ರಗಳಿಗೆ ಎರಡು ದಿನವಾದರೂ ಲಾಗಿನ್ ಐ.ಡಿ ನೀಡಿಲ್ಲ. ಇದರಿಂದಾಗಿ, ಗ್ರಾಮೀಣ ಭಾಗದಲ್ಲಿ ತಿದ್ದುಪಡಿ ಕಾರ್ಯಕ್ಕೆ ಗ್ರಹಣ ಹಿಡಿದಿದೆ. ಇದರಿಂದಾಗಿ ಜನ ಪರದಾಡುವಂತಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಮೂರು ದಿನ ಅವಕಾಶ ಕಲ್ಪಿಸಿ, ಜಿಲ್ಲಾವಾರು ದಿನಾಂಕಗಳನ್ನು ನಿಗದಿಪಡಿಸಿತ್ತು. ಅದರಂತೆ, ರಾಮನಗರ ಜಿಲ್ಲೆಯಲ್ಲಿ ಅ. 10ರಿಂದ 13ರವರೆಗೆ ತಿದ್ದುಪಡಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ತಿದ್ದುಪಡಿ ಕಾರ್ಯಕ್ಕೆ ಜಿಲ್ಲೆಯ 153 ಗ್ರಾಮ ಒನ್ ಕೇಂದ್ರಗಳಿಗೆ ಸೇವಾ ಸಿಂಧು ಲಾಗಿನ್ ಐ.ಡಿ ನೀಡುವಲ್ಲಿ ವಿಳಂಬವಾಗಿದೆ.
ಅಸಮಾಧಾನ: ತಿದ್ದುಪಡಿ ಕೆಲಸಕ್ಕಾಗಿಯೇ ತಮ್ಮ ಕೆಲಸ–ಕಾರ್ಯ ಬಿಟ್ಟು ಕೇಂದ್ರಕ್ಕೆ ಸತತ ಎರಡು ದಿನ ಕೇಂದ್ರಗಳಿಗೆ ಬಂದಿರುವ ಚೀಟಿದಾರರು, ಬಂದ ದಾರಿಗೆ ಸುಂಕವಿಲ್ಲವೆಂದು ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ವಾಪಸ್ಸಾಗಿದ್ದಾರೆ.
ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ, ಮದುವೆಯಾದವರ ಅಥವಾ ಮೃತರ ಹೆಸರು ತೆಗೆದು ಹಾಕುವುದು, ವಿಳಾಸ ಬದಲಾವಣೆ, ಹೆಸರಿನ ದೋಷ ಸರಿಪಡಿಸುವುದು ಸೇರಿದಂತೆ ಇತರ ತಪ್ಪುಗಳ ತಿದ್ದುಪಡಿಗೆ, ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಮತ್ತು ಗ್ರಾಮೀಣ ಭಾಗದಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ಅವಕಾಶ ನೀಡಲಾಗಿತ್ತು.
ದಿನಾಂಕ ವಿಸ್ತರಿಸಲಿ: ‘ಬೇರೆ ಸಂದರ್ಭಗಳಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಾದರೆ, ಈಗ ತಿದ್ದುಪಡಿ ಸೇವೆಯೇ ಲಭ್ಯವಿಲ್ಲ. ಮೂರು ದಿನ ತಿದ್ದುಪಡಿಗೆ ಅವಕಾಶ ಕೊಟ್ಟಿರುವ ಆಹಾರ ಇಲಾಖೆ, ಎರಡು ದಿನವಾದರೂ ಸಮಸ್ಯೆಯನ್ನು ಬಗೆಹರಿಸದಿರುವುದು ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ’ ಎಂದು ಪಾಲಬೋವಿದೊಡ್ಡಿಯ ಮುನೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಆಸ್ಪತ್ರೆ, ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಸಂದರ್ಭದಲ್ಲಿ ಪಡಿತರ ಚೀಟಿ ಅತ್ಯಗತ್ಯವಾಗಿದೆ. ಕುಟುಂಬದ ಇಬ್ಬರ ಹೆಸರನ್ನು ಸೇರಿಸುವ ಜೊತೆಗೆ, ತಪ್ಪಾಗಿ ನಮೂದಾಗಿರುವ ಒಬ್ಬರ ಹೆಸರನ್ನು ಸರಿಪಡಿಸಬೇಕಿತ್ತು. ಇಂದಿನ ಸ್ಥಿತಿ ನೋಡಿದರೆ ಶುಕ್ರವಾರವೂ ಕೆಲಸವಾಗುವುದು ಅನುಮಾನ. ಹಾಗಾಗಿ, ಇಲಾಖೆಯು ತಿದ್ದುಪಡಿ ದಿನಾಂಕವನ್ನು ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.
ಪಡಿತರ ತಿದ್ದುಪಡಿ ಮಾಡಿಸುವುದಕ್ಕಾಗಿ ಬೆಳಿಗ್ಗೆಯಿಂದ ನಾಲ್ಕೈದು ಸಲ ಗ್ರಾಮ ಒನ್ ಕೇಂದ್ರಕ್ಕೆ ಬಂದು ಹೋಗಿದ್ದೇವೆ. ಆದರೆ ಅಲ್ಲಿನ ಸಿಬ್ಬಂದಿ ನಮಗೆ ಲಾಗಿನ್ ಐ.ಡಿ ಕೊಟ್ಟಿಲ್ಲ ಎಂದು ವಾಪಸ್ ಕಳಿಸಿದರು– ಗೌರಮ್ಮ ರಾಮನಗರ
ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳಿಗೆ ಪಡಿತರ ಚೀಟಿ ಅತ್ಯಗತ್ಯ. ಯಾವಾಗಲೋ ಒಮ್ಮೆ ತಿದ್ದುಪಡಿಗೆ ಅವಕಾಶ ಕೊಡುತ್ತಾರೆ. ಆದರೆ ಗ್ರಾಮ ಒನ್ ಕೇಂದ್ರಗಳಲ್ಲಿ ತಿದ್ದುಪಡಿಯನ್ನೇ ಮಾಡುತ್ತಿಲ್ಲ –ನವೀನ್ ಪಾಲಬೋವಿದೊಡ್ಡಿ
ಪಡಿತರ ಚೀಟಿ ತಿದ್ದುಪಡಿಗಾಗಿ ಗ್ರಾಮ ಒನ್ ಕೇಂದ್ರಗಳಿಗೆ ತಕ್ಷಣ ಲಾಗಿನ್ ಐ.ಡಿ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶುಕ್ರವಾರದಿಂದ ತಿದ್ದುಪಡಿ ಕೆಲಸ ಸರಾಗವಾಗಿ ನಡೆಯಲಿದೆ –ರಮ್ಯ, ಉಪ ನಿರ್ದೇಶಕಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.