ADVERTISEMENT

ಕೈಗಾರಿಕೆ ಸ್ಥಾಪಿಸಿಯೇ ಸಿದ್ಧ: ಶಾಸಕ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 6:19 IST
Last Updated 20 ಸೆಪ್ಟೆಂಬರ್ 2021, 6:19 IST
ಎ. ಮಂಜುನಾಥ್‌ 
ಎ. ಮಂಜುನಾಥ್‌    

ಮಾಗಡಿ: ‘ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 40 ವರ್ಷಗಳ ಕಾಲ ಮತದಾರರ ಸ್ವಾಭಿಮಾನವನ್ನು ಅಡವಿಟ್ಟುಕೊಂಡಿದ್ದ ಹುಲಿಕಟ್ಟೆ ಮನೆತನದವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿರಲಿಲ್ಲ’ ಎಂದು ಶಾಸಕ ಎ.ಮಂಜುನಾಥ್ ಆರೋಪಿಸಿದರು.

ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮರೂರು ಹ್ಯಾಂಡ್‌ಪೋಸ್ಟ್ ಬಳಿ ನಡೆದ ಕೈಗಾರಿಕಾ ವಿರೋಧದ ಸಭೆ ಬಗ್ಗೆ ನನಗೆ ಆಹ್ವಾನವಿರಲಿಲ್ಲ. ಅನಾಮಧೇಯ ಕರಪತ್ರ ಹೊರಡಿಸಿದ್ದರು. ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್ ರೈತರಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಗೊಂದಲ ಮೂಡಿಸುವ ಬದಲು ನೇರವಾಗಿ ಕಾರ್ಖಾನೆ ಸ್ಥಾಪನೆ ಬೇಕೇ, ಬೇಡವೇ ಎಂದು ಹೇಳಲಿ’ ಎಂದು ಸವಾಲು ಹಾಕಿದರು.

ADVERTISEMENT

ಮಾಜಿ ಶಾಸಕರಿಗೆ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಇಷ್ಟವಿಲ್ಲ. ನಿಮ್ಮ ಇಚ್ಛಾಶಕ್ತಿ ಏನು ಹೇಳಿ ಬಾಲಣ್ಣ. ನೀರಾವರಿ ಬಗ್ಗೆ ನಿಮಗೆ ಈಗ ಜ್ಞಾನೋದಯವಾದಂತಿವೆ. ಎಕ್ಸ್‌ಪ್ರೆಸ್‌ ಲೈನ್‌ ಬಗ್ಗೆ ಅಂದಿನ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಚರ್ಚಿಸಿ ಅಂದೇ ಎಕ್ಸ್‌ಪ್ರೆಸ್ ಲೈನ್ ಮಾಡಿಸಿದ್ದೇನೆ. ದಾಖಲೆ ಸಮೇತ ಹೋರಾಟ ಮಾಡುತ್ತಿದ್ದೇನೆ’ ಎಂದರು.

‘ಕೃಷ್ಣಾ ನದಿ ಕಣಿವೆಯ ಶಿರಾಕ್ಕೆ ಹೇಮಾವತಿ ನದಿ ನೀರು ಹರಿಸುವ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ. ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಜಿಟಿಡಿಸಿ ತಂದದ್ದು ತಪ್ಪಾ. ನಿಮ್ಮ ಅಧಿಕಾರಾವಧಿಯಲ್ಲಿ ಟಿ.ಬಿ. ಜಯಚಂದ್ರ ಕೃಷ್ಣಾ ನದಿ ಕಣಿವೆಗೆ ಹೇಮಾವತಿ ನದಿ ನೀರು ಹರಿಸಿದಾಗ ಪೆಪ್ಪರ್ ಮೆಂಟ್ ತಿನ್ನುತ್ತಿದ್ರಾ’ ಎಂದು ವ್ಯಂಗ್ಯವಾಡಿದರು.

ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನಕ್ಕೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ₹ 780 ಕೋಟಿ ಮಂಜೂರಾತಿ ನೀಡಿದ್ದರು. ಪುನಶ್ಚೇತನ ಕೆಲಸ ನಡೆಯುತ್ತಿದೆ. ಹೇಮಾವತಿ ನದಿ ನೀರು ಹರಿಸುವ ಕಾಮಗಾರಿ ಪೈಪ್ ಅಳವಡಿಕೆಗೆ ತಾವು ಅಡ್ಡಿಪಡಿಸಿ ಕುಯುಕ್ತಿ ಮಾಡಿದ್ದರಿಂದ ಪೈಪ್ ಅಳವಡಿಸಿಲ್ಲ. ಅದು ತುಕ್ಕು ಹಿಡಿಯುವುದಿಲ್ಲ ಎಂದು
ಹೇಳಿದರು.

‘ಮತದಾರರಿಗೆ ಮಾತು ಕೊಟ್ಟಿದ್ದಂತೆ ರೈತರ ಕಾಲು ಕೈಹಿಡಿದು ಆ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.