ರಾಮನಗರದ ಶ್ರೀ ಕೃಷ್ಣ ಸ್ಮೃತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಫಲಾನುಭವಿಗಳಿಗೆ ಗೃಹೋಪಯೋಗಿ ಹಾಗೂ ಆರೋಗ್ಯ ತಪಾಸಣಾ ಉಪಕರಣಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ವಾರ್ತೆ
ರಾಮನಗರ: ‘ವಿಪತ್ತುಗಳ ಮೂಲಕ ಸಂಕಷ್ಟಗಳು ಬಂದಾಗ, ರೆಡ್ ಕ್ರಾಸ್ ಸಂಸ್ಥೆಯು ನಿಸ್ವಾರ್ಥವಾಗಿ ಸರ್ಕಾರದೊಂದಿಗೆ ಕೈಜೋಡಿಸಿ ನೆರವು ನೀಡುವ ಮೂಲಕ, ಮಾನವೀಯತೆ ಮೆರೆಯುತ್ತಾ ಬಂದಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕ ಅಭಿಪ್ರಾಯಪಟ್ಟರು.
ನಗರದ ಶ್ರೀ ಕೃಷ್ಣ ಸ್ಮೃತಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯು ಗುರುವಾರ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಗೃಹೋಪಯೋಗಿ ಹಾಗೂ ಆರೋಗ್ಯ ತಪಾಸಣಾ ಉಪಕರಣಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅರ್ಹರಿಗೆ ಅಗತ್ಯ ಉಪಕರಣಗಳನ್ನು ವಿತರಿಸುವ ಸಂಸ್ಥೆಯು, ಯಾವುದೇ ನಿರೀಕ್ಷೆ ಇಲ್ಲದೆ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಅಗತ್ಯವಿರುವವರಿಗೆ ರಕ್ತ ನೀಡುವ ಕೆಲಸ ಮಾಡುತ್ತಿದೆ. ನೇತ್ರದಾನದ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆ ಮಾಡಿಕೊಂಡು ಬಂದಿದೆ’ ಎಂದರು.
‘ಸಂಸ್ಥೆಯು ಮಾನವೀಯ ನೆಲೆಗಟ್ಟಿನಲ್ಲಿ ಆಹಾರ, ಆಶ್ರಯ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಮುಖ್ಯವಾಗಿ ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉತ್ತೇಜಿಸುತ್ತಿದೆ. ಯುದ್ಧದಲ್ಲಿ ಗಾಯಗೊಂಡ ಸೈನಿಕರ ರಕ್ಷಣೆಯಂತಹ ಮಹತ್ತರ ಕಾರ್ಯಗಳನ್ನು ಮಾಡುತ್ತಿದೆ’ ಎಂದು ಬಣ್ಣಿಸಿದರು.
‘ಹೆನ್ರಿ ಡ್ಯುನಾಂಟ್ 1863ರಲ್ಲಿ ಸ್ವಿಟ್ಜರ್‌ಲೆಂಡ್‌ನ ಜಿನಿವಾದಲ್ಲಿ ರೆಡ್ ಕ್ರಾಸ್ ಸಂಸ್ಥೆ ಹುಟ್ಟು ಹಾಕಿದರು. ಮಾನವೀಯ ಕಾರ್ಯಗಳಿಗಾಗಿ ಮೂರು ಬಾರಿ ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ರೆಡ್ ಕ್ರಾಸ್, ಅಂತರರಾಷ್ಟ್ರೀಯ ಮಾನವೀಯ ಚಳುವಳಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರಥಮ ಚಿಕಿತ್ಸೆಯ ತರಬೇತಿ ನೀಡುವುದು ಹಾಗೂ ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಕಾರ್ಯ ಮಾಡುತ್ತಾ ಬಂದಿದೆ’ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಮಾತನಾಡಿ, ‘ಅತಿವೃಷ್ಟಿಯಿಂದ ಹಾನಿಯಾದ ಸ್ಥಳಗಳ ಜನರಿಗೆ ನೆರವು ನೀಡುವ ಕಾರ್ಯವನ್ನು ರೆಡ್ ಕ್ರಾಸ್ ಮಾಡುತ್ತಿದೆ. ಸಮಾಜದ ಕಟ್ಟಕಡೆಯ ಹಾಗೂ ಅತ್ಯಂತ ತೊಂದರೆಗೊಳಗಾದ ವ್ಯಕ್ತಿಗಳಿಗೂ ನೆರವು ನೀಡುತ್ತಿದೆ’ ಎಂದರು.
‘ಕಾನೂನು ಸೇವೆಗಳ ಪ್ರಾಧಿಕಾರವು ಬಡವರಿಗೆ ಉಚಿತವಾಗಿ ಕಾನೂನು ಸೇವೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಕಾನೂನು ಸಹಾಯವಾಣಿ: 15100ಗೆ ಕರೆ ಮಾಡುವ ಮೂಲಕ ಅಥವಾ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಪ್ರಾಧಿಕಾರದ ಕಚೇರಿಗೆ ಬೆಳಗ್ಗೆ 10ರಿಂದ ಸಂಜೆ 5.45ರವರೆಗೆ ಭೇಟಿ ನೀಡಿ ಕಾನೂನು ಕುರಿತು ಸಲಹೆಗಳನ್ನು ಪಡೆಯಬಹುದಾಗಿದೆ’ ಎಂದು ತಿಳಿಸಿದರು.
‘ಜಿಲ್ಲಾ ಹಾಗೂ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ಸೆ. 13ರಂದು ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜಿ ಸಂಧಾನದ ಮೂಲಕ ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ’ ಎಂದು ಸಲಹೆ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ಎಚ್.ವಿ. ಶೇಷಾದ್ರಿ ಅಯ್ಯರ್, ಕೃಷ್ಣ ಸ್ಮೃತಿ ಕಲ್ಯಾಣ ಮಂಟಪದ ಮಾಲೀಕ ಎ.ಎಸ್. ಕೃಷ್ಣಮೂರ್ತಿ, ಉಪ ಸಭಾಪತಿ ಹಾಗೂ ರಾಜ್ಯ ಶಾಖೆ ಆಡಳಿತ ಮಂಡಳಿ ಸದಸ್ಯ ವಿ. ಬಾಲಕೃಷ್ಣ ಮಾತನಾಡಿದರು. ಸಂಸ್ಥೆಯ ಎಂ. ಪರಮಶಿವಯ್ಯ, ನರೇಂದ್ರ, ಬೋರಲಿಂಗೇಗೌಡ, ತಜ್ಮುಲ್ ಅಲಿಬೇಗ್ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.