ADVERTISEMENT

ರೇಣುಕಾಂಭ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:39 IST
Last Updated 20 ಮೇ 2019, 13:39 IST
ರೇಣುಕಾಂಭ ಅಮ್ಮನವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು
ರೇಣುಕಾಂಭ ಅಮ್ಮನವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು   

ರಾಮನಗರ: ಇಲ್ಲಿನ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಸ್ವಾಮಿ ಕ್ಷೇತ್ರದಲ್ಲಿನ ರೇಣುಕಾಂಭ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ಸೋಮವಾರ ನಡೆಯಿತು.

ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವ ನಡೆದ ಮೂರನೇ ದಿನಕ್ಕೆ ಶ್ರೀ ರೇಣುಕಾಂಭ ಅಮ್ಮನವರ ರಥೋತ್ಸವ ನಡೆಯುವುದು ಇಲ್ಲಿ ನಡೆದು ಬಂದಿರುವ ಸಂಪ್ರದಾಯವಾಗಿದೆ. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಿತು. ಮಧ್ಯಾಹ್ನ 12. 05ಕ್ಕೆ ಅಲಂಕಾರಗಳಿಂದ ಶೃಂಗಾರಗೊಂಡಿದ್ದ ರಥಕ್ಕೆ ಶ್ರೀ ರೇಣುಕಾಂಭ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಸಮೇತ ತಂದು ರಥದಲ್ಲಿ ಪ್ರತಿಷ್ಠಾಪಿಸಿಲಾಯಿತು.

ರೇವಣಸಿದ್ದೇಶ್ವರಸ್ವಾಮಿ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಶೃಂಗಾರಗೊಂಡಿದ್ದ ರಥಕ್ಕೆ ಪೂಜಾ ವಿಧಿ ವಿಧಾನ ಪೂರೈಸಿದರು. ನಂತರ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಟಿ.ಎಂ. ಬಸವರಾಜು ಮತ್ತು ದೇವಾಲಯದ ಆಡಳಿತಾಧಿಕಾರಿ ಮಂಗಳಮ್ಮ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರೇಣುಕಾಪ್ರಸಾದ್, ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ದೇವರಾಜು ರಥದ ಚಕ್ರಕ್ಕೆ ಪೂಜಿಸಿ ತೆಂಗಿನಕಾಯಿ ಒಡೆದು ಉತ್ಸವಮೂರ್ತಿಗೆ ಪುಷ್ಪಾರ್ಚನೆ ನಡೆಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಹೂ, ಹಣ್ಣು, ಬಾಳೆಹಣ್ಣು, ಜವನ ಎಸೆದು, ಜೈ ರೇಣುಕಾಂಭ, ಜೈ ಜೈ ರೇಣುಕಾಂಭ ಎಂದು ಜೈಕಾರ ಹಾಕುತ್ತಾ ತೇರು ಎಳೆದರು. ರಥೋತ್ಸವದಲ್ಲಿ ರೇಣುಕಾಂಭ ದೇವಿಯ ದೇವರ ಕುಳಗಳು, ಹೊಸದಾಗಿ ಮದುವೆಯಾಗಿರುವ ದಂಪತಿಗಳು, ಸಂತಾನ ಪ್ರಾಪ್ತಿಗಾಗಿ ಬರುವವರು, ದೇವಾಲಯದ ಸೇವಾ ಗ್ರಾಮಗಳ ಮತ್ತು ಅಕ್ಕಪಕ್ಕದ ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್, ರೇವಣಸಿದ್ದೇಶ್ವರ ಸ್ವಾಮಿ ದಾಸೋಹ ಮಠದ ಬಸವಲಿಂಗರಾಜ ಸ್ವಾಮೀಜಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಹೊನ್ನದಾಸೇಗೌಡ, ರಾಜಣ್ಣ, ದೇವಾಲಯದ ಪ್ರಧಾನ ಅರ್ಚಕ ಮೂರ್ತಿ, ಮುಖಂಡರಾದ ಅವ್ವೇರಹಳ್ಳಿ ಶಿವಲಿಂಗಯ್ಯ, ಗುತ್ತಿಗೆದಾರ ಕೆ. ತಮ್ಮಣ್ಣ, ಎ.ಸಿ. ಕೆಂಪಣ್ಣ, ಬಸವರಾಜು, ಮಾರೇಗೌಡ, ನಂದೀಶ್, ಎಚ್.ಎಸ್. ದೇವರಾಜು, ಪೂಜಾರಿದೊಡ್ಡಿ ಗಂಗಾಧರ್, ಪುಟ್ಟಸ್ವಾಮಿ, ಅಮ್ಮನಪುರದೊಡ್ಡಿ ಶಶಿಕುಮಾರ್, ಲಿಂಗರಾಜು, ಪುಟ್ಟಸ್ವಾಮಿ, ವಿಜಯಕುಮಾರ್, ದೇವರಾಜು, ರಂಗಸ್ವಾಮಿ, ಗ್ರಾಮಲೆಕ್ಕಾಧಿಕಾರಿ ಕೃಷ್ಣಪ್ಪ, ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.