ADVERTISEMENT

ರೇಷ್ಮೆನಾಡು ಕನ್ನಡ ಹಬ್ಬಕ್ಕೆ ರಾಮನಗರ ಸಜ್ಜು: ಕೆ.ಶೇಷಾದ್ರಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 2:28 IST
Last Updated 21 ಡಿಸೆಂಬರ್ 2025, 2:28 IST
ರಾಮನಗರದಲ್ಲಿ ಸೋಮವಾರ ನಡೆಯುವ ರೇಷ್ಮೆನಾಡು ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ರಾಮನಗರದ ರಸ್ತೆಗಳನ್ನು ಕನ್ನಡ ಬಾವುಟಗಳಿಂದ ಅಲಂಕಾರ ಮಾಡಿರುವುದು
ರಾಮನಗರದಲ್ಲಿ ಸೋಮವಾರ ನಡೆಯುವ ರೇಷ್ಮೆನಾಡು ಕನ್ನಡ ಹಬ್ಬ ಕಾರ್ಯಕ್ರಮಕ್ಕೆ ರಾಮನಗರದ ರಸ್ತೆಗಳನ್ನು ಕನ್ನಡ ಬಾವುಟಗಳಿಂದ ಅಲಂಕಾರ ಮಾಡಿರುವುದು   

ರಾಮನಗರ: ನಗರಸಭೆ ವತಿಯಿಂದ ಡಿ.22ರಂದು ಸಂಜೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರೇಷ್ಮೆನಾಡು ಕನ್ನಡ ಹಬ್ಬಕ್ಕೆ ಆಕರ್ಷಕವಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.

ನಗರದ ಎಲ್ಲ ಪ್ರಮುಖ ರಸ್ತೆ, ವೃತ್ತ ಮತ್ತು ಸರ್ಕಾರಿ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಎಂಪಿಎಂಸಿ ಮಾರುಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು-ಮೈಸೂರು ಹೆದ್ದಾರಿ, ಐಜೂರು ವೃತ್ತದಿಂದ ಕೆಂಪೇಗೌಡ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ಎಂ.ಜಿ ರಸ್ತೆ, ಜೂನಿಯರ್ ಕಾಲೇಜು ಮೈದಾನ ರಸ್ತೆ ಸೇರಿದಂತೆ ಹಲವು ಬೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಎಲ್ಲ ರಸ್ತೆಗಳಲ್ಲಿ ಕನ್ನಡ ಬಾವುಟ ಹಾರಿಸಲಾಗಿದೆ ಮತ್ತು ಮೆರವಣಿಗೆ ಮಾರ್ಗದುದ್ದಕ್ಕೂ ತಳಿರು ತೋರಣ ಕಟ್ಟಲಾಗಿದೆ.

ಸಂಜೆ 3ಕ್ಕೆ ‌ಆರಂಭವಾಗುವ ಮೆರವಣಿಗೆಯಲ್ಲಿ 20 ಜಿಲ್ಲೆಗಳ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಮೈಸೂರು ನಗಾರಿ, ಉತ್ತರ ಕನ್ನಡದ ಡಮಾಮಿ ನೃತ್ಯ, ಚಾಮರಾಜನಗರದ ಸೋಲಿಗರ ನೃತ್ಯ, ಕೋಲಾರದ ಮರಗಾಲು ಮತ್ತು ಗಾರುಡಿ ಗೊಂಬೆ, ಹಾಸನದ ಚಟ್ಟಿಮೇಳ, ಮಂಡ್ಯದ ಕಾಡುಗೊಲ್ಲರ ಕೋಲಾಟ, ತುಮಕೂರಿನ ಮಣೇವು ನೃತ್ಯ, ಶಿವಮೊಗ್ಗದ ಹೋಳಿ ನೃತ್ಯ, ಧಾರವಾಡದ ಜಗ್ಗಲಿಗೆ ಮೇಳ, ಬೆಳಗಾವಿ ಕರಡಿ ಮಜಲು, ಕೊಡಗಿನ ಜೇನು ಕುರುಬರ ನೃತ್ಯ, ಬಳ್ಳಾರಿ ಲೆಂಗಿನ್ ನೃತ್ಯ, ಕಲಬುರ್ಗಿ ಲಂಬಾಣಿ ಮಹಿಳೆಯರ ಬೂಮರ್ ನೃತ್ಯ, ಬೆಂಗಳೂರು ದಕ್ಷಿಣ ಜಿಲ್ಲೆ ಪೂಜಾ ಕುಣಿತ, ಡೊಳ್ಳು, ವೀರಗಾಸೆ, ಪಟ, ಸೋಮನ ಕುಣಿತ, ಚಿಲಿಪಿಲಿ ಗೊಂಬೆ ಮತ್ತು ಕೋಳಿ ನೃತ್ಯ ಸೇರಿದಂತೆ ಹತ್ತಾರು ಜನಪದ ಕಲಾ ಪ್ರಕಾರಗಳು ಪ್ರದರ್ಶಿತವಾಗಲಿವೆ. ಮೆರವಣಿಗೆಯಲ್ಲಿ ನಗರಸಭೆಯ ಸ್ವಚ್ಛತೆ, ಪೌರ ಕಾರ್ಮಿಕರ ಕೆಲಸಗಳನ್ನು ಚಿತ್ರಿಸುವ ಸ್ತಬ್ಧಚಿತ್ರಗಳು ಕೂಡ ಇರಲಿವೆ.

ADVERTISEMENT

ಕ್ರೀಡಾಂಗಣದಲ್ಲಿ ವಿಶೇಷ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಪುಸ್ತಕ ಮೇಳ ಆಯೋಜಿತವಾಗಿದೆ. ಶಿಕ್ಷಣ, ರಾಜಕೀಯ, ಕ್ರೀಡೆ, ರಂಗಭೂಮಿ, ಸಂಶೋಧನೆ, ಸಮಾಜ ಸೇವೆ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಲಾಗುವುದು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ಪೌರ ಸನ್ಮಾನ ನಡೆಯಲಿದೆ. ಸಂಗೀತ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕರಾದ ಗುರುಕಿರಣ್, ರಾಜೇಶ್ ಕೃಷ್ಣನ್, ಗುನಾಲ್ ಗಾಂಜವಾಲ್, ಅನುರಾಧ ಭಟ್, ಮಂಗಳಾ, ಎಲ್.ಆರ್.ಈಶ್ವರಿ ಮುಂತಾದವರು ರಸಮಂಜರಿ ಕಾರ್ಯಕ್ರಮ ನೀಡಲಿದ್ದಾರೆ. 

ಇದೇ ಮೊದಲ ಬಾರಿಗೆ ರಾಮನಗರ ನಗರಸಭೆ ವತಿಯಿಂದ ಅದ್ಧೂರಿಯಾಗಿ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೆ.ಶೇಷಾದ್ರಿ (ಶಶಿ) ಅಧ್ಯಕ್ಷ ನಗರಸಭೆ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.