ADVERTISEMENT

ಮದುವೆ, ಸಮಾರಂಭಗಳಿಗೆ ನಿರ್ಬಂಧ: ಜಿಲ್ಲಾಧಿಕಾರಿಯಿಂದ ಮಾರ್ಗಸೂಚಿ ಪ್ರಕಟ

ಜಿಲ್ಲೆಯಾದ್ಯಂತ ಜಾತ್ರೆ, ರಥೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 3:40 IST
Last Updated 19 ಏಪ್ರಿಲ್ 2021, 3:40 IST

ರಾಮನಗರ: ಕೋವಿಡ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಜಿಲ್ಲೆಯಲ್ಲೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮದುವೆ ಮತ್ತು ಸಾರ್ವಜನಿಕ ಸಮಾರಂಭ, ಆಚರಣೆ, ಮನರಂಜನಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಂಭವವಿರುತ್ತದೆ. ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್‌ರಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರ ನಿಗದಿಪಡಿಸಿದ ಸಂಖ್ಯೆಯ ಮಿತಿಯೊಳಗೆ ಜನರು ಪಾಲ್ಗೊಳ್ಳಬೇಕಿದೆ. ಕಾರ್ಯಕ್ರಮದಲ್ಲಿ ಸರ್ಕಾರ ಸೂಚಿಸಿರುವ ಜನರ ಸಂಖ್ಯೆ ಮಿತಿ ಮೀರದಂತೆ ಸಂಬಂಧಿಸಿದ ಸಮುದಾಯ ಭವನ, ಕಲ್ಯಾಣ ಮಂಟಪ, ಸಭಾಂಗಣ ಸ್ಥಳಗಳ ಮಾಲೀಕರಿಂದ ದೃಢೀಕರಣ ಪತ್ರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಹಶೀಲ್ದಾರ್‌ಗಳಿಗೆ
ಸೂಚಿಸಿದ್ದಾರೆ.

ಮಿತಿ ನಿಗದಿ: ಹೊಸ ಮಾರ್ಗಸೂಚಿ ಪ್ರಕಾರ ತೆರೆದ ಪ್ರದೇಶದಲ್ಲಿ ಮದುವೆ ನಡೆಯುತ್ತಿದ್ದರೆ 200 ಜನರಿಗೆ ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಹಾಗೂ ಮುಚ್ಚಿದ ಯಾವುದೇ ಪ್ರದೇಶದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ 100 ಜನರಿಗೆ ಮಿತಿಗೊಳಿಸಬೇಕು. ಜನ್ಮದಿನ ಹಾಗೂ ಇತರೆ ಆಚರಣೆ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 50 ಹಾಗೂ ಸಭಾಂಗಣ, ಹಾಲ್ ಹಾಗೂ ಇತರೆ ಮುಚ್ಚಿದ ಪ್ರದೇಶದಲ್ಲಿ 25 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ರಾಜಕೀಯ ಆಚರಣೆಗಳು/ ಸಮಾರಂಭಗಳು ತೆರೆದ ಪ್ರದೇಶದಲ್ಲಿ 200 ಜನ ಮೀರದಂತೆ ನೋಡಿಕೊಳ್ಳಬೇಕು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ADVERTISEMENT

ತಹಶೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡವು ಕಲ್ಯಾಣ ಮಂಟಪ, ಸಮುದಾಯ ಭವನ ಮೊದಲಾದ ಕಡೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಮಾರ್ಗಸೂಚಿ ಉಲ್ಲಂಘಿಸಿ ಹೆಚ್ಚಿನ ಜನರನ್ನು ಸೇರಿಸಿದ್ದಲ್ಲಿ ಅಂತಹ ಸಭಾಂಗಣಗಳಿಗೆ ಬೀಗ ಜಡಿಯಲಾಗುವುದು. ಅಂತಹವರ ವಿರುದ್ಧ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಜಾತ್ರೆ, ರಥೋತ್ಸವ ಮೊದಲಾದ ಧಾರ್ಮಿಕ ಆಚರಣೆ ಗಳನ್ನೂ ತಾತ್ಕಾಲಿಕವಾಗಿ ನಿಷೇಧಿಸ ಲಾಗಿದೆ. ಕೋವಿಡ್‌ ತಡೆಗೆ ಜನರು ಸಹಕರಿಸಬೇಕು ಎಂದು
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.