ADVERTISEMENT

ಭಿನ್ನಾಭಿಪ್ರಾಯ: ರೇವಣ ಸಿದ್ದೇಶ್ವರ ರಥೋತ್ಸವ ರದ್ದು, ಭಕ್ತರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 12:08 IST
Last Updated 18 ಮೇ 2019, 12:08 IST
ರಥೋತ್ಸವ ಸಲುವಾಗಿ ನೆರೆದಿದ್ದ ಭಕ್ತರು
ರಥೋತ್ಸವ ಸಲುವಾಗಿ ನೆರೆದಿದ್ದ ಭಕ್ತರು   

ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿ ಬಳಿಯ ರೇವಣ ಸಿದ್ದೇಶ್ವರ ಕ್ಷೇತ್ರದಲ್ಲಿ ಶನಿವಾರ ನಡೆಯಬೇಕಿದ್ದ ರಥೋತ್ಸವವು ಜಿಲ್ಲಾಡಳಿತ ಹಾಗೂ ಸ್ಥಳೀಯರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ರದ್ದಾಯಿತು. ಬದಲಾಗಿ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಪ್ರತಿ ವರ್ಷ ರಥೋತ್ಸವದ ಸಂದರ್ಭದಲ್ಲಿಯೇ ಬಸವೇಶ್ವರರ ಅಗ್ನಿಕೊಂಡವು ನಡೆಯುತ್ತಾ ಬಂದಿದೆ. ಈ ವರ್ಷ ಕೊಂಡ ಹಾಯುವ ಸ್ಥಳಕ್ಕೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಸುತ್ತಲಿನ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಹಿಂದೆ 60 ಅಡಿ ಉದ್ದದ ಕೊಂಡ ನಿರ್ಮಿಸಲಾಗುತಿತ್ತು. ಕಳೆದ ವರ್ಷ ಕೊಂಡ ಹಾಯುವ ವೇಳೆ ವಿಜಯ್‌ಕುಮಾರ್‌ ಎಂಬ ಅರ್ಚಕರು ಬಿದ್ದು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೊಂಡದ ಉದ್ದವನ್ನು ತಗ್ಗಿಸುವಂತೆ ಅರ್ಚಕ ಸಮುದಾಯವು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಅದರಂತೆ ಜಿಲ್ಲಾಡಳಿತವು 60 ಅಡಿಗೆ ಬದಲಾಗಿ 15 ಅಡಿ ಉದ್ದದ ಕೊಂಡ ನಿರ್ಮಿಸಿತ್ತು. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಹಿಂದಿನ ಮಾದರಿಯಲ್ಲಿಯೇ ಕೊಂಡ ನಿರ್ಮಿಸಲು ಆಗ್ರಹಿಸಿ ಕಾರ್ಯಕ್ರಮ ಬಹಿಷ್ಕರಿಸಿದರು. ಹೀಗಾಗಿ ಶನಿವಾರ ಮುಂಜಾನೆ ಕೊಂಡೋತ್ಸವ ನಡೆಯಲಿಲ್ಲ.

ಶನಿವಾರ ಮಧ್ಯಾಹ್ನ 12.05ಕ್ಕೆ ರಥೋತ್ಸವ ನಿಗದಿಯಾಗಿತ್ತು. ಜಿಲ್ಲಾಡಳಿತದಿಂದ ಪೂಜೆ ನಡೆಸಿ ಚಾಲನೆಯನ್ನೂ ನೀಡಲಾಯಿತು. ಆದರೆ ತೇರು ಎಳೆಯಲು ಬರಬೇಕಿದ್ದ ವಿಶ್ವಕರ್ಮ ಸಮುದಾಯದವರು ಗೈರಾದರು. ಹೀಗಾಗಿ ರಥ ಮುಂದೆ ಸಾಗಲಿಲ್ಲ. ಕಡೆಗೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.

ADVERTISEMENT

ರಾಜ್ಯದ ವಿವಿಧ ಭಾಗಗಳಿಂದ ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರು ಇದರಿಂದ ನಿರಾಸೆಗೊಂಡರು. ನಿಂತಿದ್ದ ರಥಕ್ಕೇ ಹಣ್ಣು ಕಾಯಿ ಅರ್ಪಿಸಿದರು.

*ಕೊಂಡದ ಅಳತೆಯ ವಿಚಾರದಲ್ಲಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕೊಂಡೋತ್ಸವ, ರಥೋತ್ಸವಕ್ಕೆ ಅಡ್ಡಿಯಾಯಿತು. ಬದಲಾಗಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು
–ಕೃಷ್ಣಮೂರ್ತಿ
ಉಪ ವಿಭಾಗಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.