ADVERTISEMENT

"ರಸ್ತೆ ಅಪಘಾತ ತಡೆಗೆ ವೈಜ್ಞಾನಿಕ ಕ್ರಮ"

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 14:39 IST
Last Updated 7 ಸೆಪ್ಟೆಂಬರ್ 2020, 14:39 IST
ಸಭೆಯಲ್ಲಿ ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿದರು
ಸಭೆಯಲ್ಲಿ ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿದರು   

ರಾಮನಗರ: ಜಿಲ್ಲೆ ವ್ಯಾಪ್ತಿಯಲ್ಲಿ ಹೆದ್ದಾರಿಗಳು, ಒಳ ರಸ್ತೆಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸುವಂತೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಚ್ಚು ಅಪಘಾತ ಸಂಭವಿಸುವಂತಹ 'ಕಪ್ಪು ವಲಯ'ಗಳನ್ನು ಗುರುತಿಸಿ, ಅಂತಹ ಕಡೆಗಳಲ್ಲಿ ವಾಹನ ಚಾಲಕರು, ಸವಾರರು ಮತ್ತು ಪಾದಚಾರಿಗಳಿಗೆ ಎಚ್ಚರಿಕೆ ನೀಡುವ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಸೂಚಿಸಿದರು.

'ಯು' ತಿರುವು: ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಡುವೆ ಬರುವಂತಹ ರಸ್ತೆ ವಿಭಜಕಗಳಿರುವ ಕಡೆಗಳಲ್ಲಿ ಗಿಡ-ಗಂಟಿ ಹಾಗೂ ಮರಗಳು ಬೆಳೆದು ಕೊಂಡಿವೆ. ಇದರಿಂದ ವಾಹನ ಚಾಲಕರಿಗೆ ರಸ್ತೆ ನಡುವೆ ಇರುವ 'ಯು' ತಿರುವುಗಳು ಕಾಣಿಸದೇ ಅಪಘಾತವಾಗುತ್ತಿದೆ. ಇದನ್ನು ತಪ್ಪಿಸಲು ಬೆಳೆದಿರುವ ಮರಗಳು ಮತ್ತು ಸಸ್ಯಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ಜಾನಪದ ಲೋಕದ ಬಳಿ ಇರುವ ಯು ತಿರುವು ಚಿಕ್ಕದಾಗಿದ್ದು, ವಾಹನ ಚಾಲಕರಿಗೆ ತಿರುವು ತೆಗೆದುಕೊಳ್ಳಲು ಕಷ್ಟವಾಗುತ್ತಿದೆ. ರಸ್ತೆಯು ಸಹ ಸರಿಯಾಗಿ ಕಾಣಿಸುವುದಿಲ್ಲ. ಇಲ್ಲಿರುವ ಯು ತಿರುವನ್ನು ವೈಜ್ಞಾನಿಕವಾಗಿ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಾದಚಾರಿ ಮಾರ್ಗ: ಹೆದ್ದಾರಿ ಬದಿಯಲ್ಲಿ ಅಧಿಕ ಜನ ಸಂದಣಿ ಇರುವ ಪ್ರದೇಶಗಳ ಬಳಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಒತ್ತು ನೀಡಬೇಕು. ಹಾಗೆಯೇ, ಇಂತಹ ಹೆದ್ದಾರಿಗಳಲ್ಲಿ ಮೋಟಾರ್ ಸೈಕಲ್ ಮತ್ತು ಸೈಕಲ್‌ಗಳಿಗೆ ಪ್ರತ್ಯೇಕ ಪಥಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಅಪಘಾತ ಕಡಿಮೆ: ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಅಪಘಾತದ ಪ್ರಮಾಣದಲ್ಲಿ ಶೇ 10ರಷ್ಟು ಕಡಿಮೆ ಆಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾಗಿದ್ದರಿಂದ ಅಪಘಾತದ ಸಂಖ್ಯೆಯಲ್ಲಿ ಇಳಿಮುಖವಾಗಿದೆಯೇ ಇಲ್ಲವೇ ಅಳವಡಿಸಿಕೊಂಡ ಸುರಕ್ಷತಾ ಕ್ರಮಗಳಿಂದ ಅಪಘಾತ ಕಡಿಮೆಯಾಗಿದೆಯೇ ಎನ್ನುವುದರ ಬಗ್ಗೆ ವರದಿ ನೀಡುವಂತೆ ತಿಳಿಸಿದರು.

ಅನಧಿಕೃತ ಅಂಗಡಿ ತೆರವು: ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿಗಳ ಎರಡೂ ಬದಿಯಲ್ಲಿ ಇರುವ ಅನಧಿಕೃತ ಅಂಗಡಿಗಳು ಮತ್ತು ಕಾಫಿ –ಟೀ ಮಾರುವವರನ್ನು ಆಯಾ ಆಯಾ ಗ್ರಾಮ ಪಂಚಾಯಿತಿಗಳು ತಕ್ಷಣವೇ ಖಾಲಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕರ್ನಾಟಕ ರಸ್ತೆ ಸಾರಿಗೆ ನಿಗಮ, ಲೋಕೋಪಯೋಗಿ, ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಚಿಕಿತ್ಸಾ ಕೇಂದ್ರ ಆರಂಭಿಸಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಅನುವಾಗುವಂತೆ ಹೆದ್ದಾರಿ ಪಕ್ಕದಲ್ಲಿ ತುರ್ತು ಚಿಕಿತ್ಸೆಗಾಗಿ ಟ್ರಾಮಾ ಸೆಂಟರ್ ಅನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆಯನ್ನು ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.