
ಪ್ರಜಾವಾಣಿ ವಾರ್ತೆ
ರಾಮನಗರ: ‘ನಶಿಸುತ್ತಿರುವ ತಮ್ಮ ನಾಯಕತ್ವ ಉಳಿಸಿಕೊಳ್ಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಆರ್‌ಎಸ್‌ಎಸ್ ವಿರುದ್ಧ ಮಾತನಾಡುತ್ತಿದೆ. ಆರ್‌ಎಸ್‌ಎಸ್ ವಿರೋಧಿ ನಡೆ ಕಾಂಗ್ರೆಸ್ ತೀರ್ಮಾನವಲ್ಲ. ಹಾಗಾಗಿ, ಸಂಘದ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ ಏಕಾಂಗಿಯಾಗಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್ ಅವರು ಇರಲಾರದೆ ಇರುವೆ ಬಿಟ್ಟುಕೊಂಡಿದ್ದಾರೆ. ಅವರ ಪರವಾಗಿ ಕಾಂಗ್ರೆಸ್‌ನಲ್ಲೇ ಯಾರೂ ಮಾತನಾಡುತ್ತಿಲ್ಲ. ಇದೀಗ ತಮ್ಮ ಪುತ್ರನ ರಕ್ಷಣೆಗಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದಲಿತ ಸಂಘಟನೆಗಳ ಅನಿವಾರ್ಯವಾಗಿವೆ’ ಎಂದು ವ್ಯಂಗ್ಯವಾಡಿದರು.
‘ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥ ಸಂಚಲನಕ್ಕೆ ಪ್ರತಿಯಾಗಿ ನಿನ್ನೆ ಮೊನ್ನೆ ಹುಟ್ಟಿಕೊಂಡಿರುವ ಭೀಮ್ ಆರ್ಮಿಯನ್ನು ಮುಂದಕ್ಕೆ ಬಿಟ್ಟಿದ್ದಾರೆ. ಖರ್ಗೆ ಕುಟುಂಬ ದಶಕಗಳ ಕಾಲ ಅಧಿಕಾರ ಅನುಭವಿಸಿದರೂ, ದಲಿತರ ಯಾವುದೇ ಹೋರಾಟಗಳನ್ನು ಬೆಂಬಲಿಸಲಿಲ್ಲ. ಯಾವುದೇ ನಾಯಕರನ್ನು ಬೆಳೆಸಲಿಲ್ಲ. ಈಗ ತಮ್ಮ ಪರವಾಗಿ ನಿಲ್ಲಿ ಎಂದು ದಲಿತರನ್ನು ಕೇಳುವ ನೈತಿಕತೆ ಅವರಿಗಿಲ್ಲ’ ಎಂದರು.
‘ಶೋಷಿತ ಸಮುದಾಯಗಳ ವಿರೋಧಿಯಾಗಿರುವ ಕಾಂಗ್ರೆಸ್ ಉರಿಯುವ ಮನೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಖರ್ಗೆ ಕುಟುಂಬ ದಲಿತ ಸಂಘಟನೆಗಳನ್ನು ಒಡೆದಿದೆಯೇ ಹೊರತು ಒಗ್ಗೂಡಿಸಿಲ್ಲ. ಹಾಗಾಗಿ, ಅವರ ಪರವಾಗಿ ದಲಿತ ಸಂಘಟನೆಗಳು ನಿಂತರೆ, ಅದು ಅಂಬೇಡ್ಕರ್ ಅವರಿಗೆ ಮಾಡುವ ದ್ರೋಹವಾಗುತ್ತದೆ’ ಎಂದರು.
ಸಿ.ಎಂ ಅವಕಾಶ ತಪ್ಪಿಸಿದರು!: ‘ಪ್ರಿಯಾಂಕ್ ಖರ್ಗೆ ಅವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಮಾಡಿದ ಕುತಂತ್ರ ರಾಜಕಾರಣದಿಂದಾಗಿ, ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಸಿದ್ದರಾಮಯ್ಯ ಆ ಸ್ಥಾನಕ್ಕೇರಿದರು. ಪ್ರ ಇವರು ಆ ರೀತಿ ಮಾಡದೇ ಇದ್ದಿದ್ದರೆ, ಅವರ ತಂದೆ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದರು’ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾರೋಹಳ್ಳಿ ಚಂದ್ರು, ಮುಖಂಡರಾದ ಸುರೇಶ್, ರುದ್ರಯ್ಯ, ಕಿಶನ್ ಹಾಗೂ ಇತರರು ಇದ್ದರು.
ನಾನು ಎರಡೂವರೆ ದಶಕ ಖರ್ಗೆ ಕುಟುಂಬದ ಜೊತೆಗಿದ್ದೆ. ಅವರ ಒಳ ಮತ್ತ ಹೊರಗು ಎಲ್ಲವೂ ನನಗೆ ಗೊತ್ತು. ಅವರ ಜೊತೆಗಿದ್ದ ಎಷ್ಟೋ ಮಂದಿ ಹೆಸರಿಲ್ಲದಂತಾಗಿದ್ದಾರೆ. ನಾನು ಸಮಾಧಿಯಾಗುವುದಕ್ಕೆ ಮುಂಚೆ ಬಿಜೆಪಿಗೆ ಬಂದು ಬಚಾವಾದೆ!– ಛಲವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ನಾಯಕ ವಿಧಾನ ಪರಿಷತ್ತು
ಅಪ್ಪನಿಗೆ ಕೊನೆ ಮೊಳೆ ಹೊಡೆಯುತ್ತಿರುವ ಯತೀಂದ್ರ!
‘ಸಚಿವ ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಮುಂದಿನ ಉತ್ತರಾಧಿಕಾರಿ ಎಂಬಂತಹ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸ್ವತಃ ತಮ್ಮ ತಂದೆಯ ನಾಯಕತ್ವಕ್ಕೆ ಕೊನೆ ಮೊಳೆ ಹೊಡೆಯುತ್ತಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್‌ನ ಆಂತರಿಕ ವಿಷಯ. ಆ ಪಕ್ಷದೊಳಗೆ ಸುಮಾರು ಹತ್ತು ಮಂದಿ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ. ಆ ಪೈಕಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿ.ಎಂ ಆದರೂ ನನಗೆ ಖುಷಿ. ನಾನು ಕಾಂಗ್ರೆಸ್‌ನಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ಕಡೆಗೂ ದಲಿತರೊಬ್ಬರು ಆ ಹುದ್ದೆಗೇರಿದರು ಎಂದು ಸಂಭ್ರಮಿಸುವೆ. ಆದರೆ ದಲಿತ ವಿರೋಧಿ ಕಾಂಗ್ರೆಸ್ ಎಂದಿಗೂ ಅಂತಹ ಕೆಲಸ ಮಾಡಲ್ಲ’ ಎಂದು ನಾರಾಯಣಸ್ವಾಮಿ ಕಿಡಿಕಾರಿದರು.
Cut-off box - ಐ ಲವ್ ಆರ್‌ಎಸ್‌ಎಸ್ ಡಿಎಸ್‌ಎಸ್! ‘ನಾನು ಬಿಜೆಪಿಯವನು. ಆದರೆ ಐ ಲವ್ ಆರ್‌ಎಸ್‌ಎಸ್ ಮತ್ತು ಡಿಎಸ್‌ಎಸ್. ಸಂಘವು ಯಾರಿಗೂ ಉಪದ್ರವ ಕೊಡದೆ ನಿಸ್ವಾರ್ಥ ಸೇವೆ ಮಾಡುತ್ತ ಜನರಲ್ಲಿ ದೇಶಭಕ್ತಿ ತುಂಬುವ ಕೆಲಸ ಮಾಡುತ್ತಿದೆ. ಡಿಎಸ್‌ಎಸ್ ಸಹ ದಲಿತರ ಪರವಾಗಿ ಹೋರಾಡುತ್ತಾ ದೌರ್ಜನ್ಯಗಳನ್ನು ಪ್ರಶ್ನಿಸುತ್ತಾ ಇಡೀ ಸಮುದಾಯಕ್ಕೆ ಶಕ್ತಿ ಕೊಟ್ಟಿದೆ. ಆದರೆ ಎರಡ್ಮೂರು ಕುಟುಂಬಗಳು ರಾಜ್ಯದ ದಲಿತರನ್ನು ಹಾಳು ಮಾಡಿವೆ. ದಲಿತರ ಹೆಸರಿನಲ್ಲಿ ಅವರು ಬಲಿತರಾಗಿದ್ದಾರೆಯೇ ಹೊರತು ಸಮುದಾಯ ಉದ್ದಾರಕ್ಕೆ ಯಾವುದೇ ಕೊಡುಗೆ ನೀಡಿಲ್ಲ’ ಎಂದು ಖರ್ಗೆ ಸಚಿವರಾದ ಡಾ. ಜಿ. ಪರಮೇಶ್ವರ್ ಡಾ. ಎಚ್.ಸಿ. ಮಹದೇವಪ್ಪ ಕುಟುಂಬದ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.