ADVERTISEMENT

ಆರ್‌ಟಿಇ ಮಕ್ಕಳಿಂದ ಶುಲ್ಕ ಪಡೆಯುವಂತಿಲ್ಲ: ಬಿಇಒ

​ಪ್ರಜಾವಾಣಿ ವಾರ್ತೆ
Published 22 ಮೇ 2019, 14:26 IST
Last Updated 22 ಮೇ 2019, 14:26 IST

ಚನ್ನಪಟ್ಟಣ: ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ದಾಖಲಾದ ಮಕ್ಕಳಿಂದ ಶಾಲೆಗಳ ಆಡಳಿತ ಮಂಡಳಿಯವರು ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕೆಲವು ಶಾಲೆಗಳು ಶುಲ್ಕ ಪಡೆಯುತ್ತಿರುವ ಆರೋಪಗಳು ಬರುತ್ತಿದ್ದು, ಪೋಷಕರು ಶುಲ್ಕ ನೀಡಬಾರದು. ಖಾಸಗಿ ಶಾಲೆಗಳು ಶುಲ್ಕ ನೀಡಲು ಒತ್ತಡ ಹಾಕಿದರೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

‘ಆರ್‌ಟಿಇ ಕಾಯಿದೆಯಡಿಯಲ್ಲಿ ದಾಖಲಾತಿ ಪಡೆದ ಮಕ್ಕಳಿಂದ ಯಾವುದೇ ಶುಲ್ಕ ಪಡೆಯಬಾರದು ಎಂದು ಸರ್ಕಾರದ ನಿಯಮ ಜಾರಿಯಲ್ಲಿದೆ. ಇಲ್ಲ ಸಲ್ಲದ ನೆಪ ಹೇಳಿ ಖಾಸಗಿ ಶಿಕ್ಷಣ ಸಂಸ್ಥೆಗಳು ₹ 4 ಸಾವಿರದಿಂದ ₹ 14 ಸಾವಿರವರೆಗೆ ಶುಲ್ಕ ಪಡೆಯುತ್ತಿರುವ ಆರೋಪಗಳು ಕೇಳಿಬಂದಿವೆ. ಆರೋಪಗಳು ಸಾಬೀತಾದಲ್ಲಿ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

‘ಆರ್‌ಟಿಇ ಕಾಯಿದೆಯಡಿಯಲ್ಲಿ ದಾಖಲಾದ ಪ್ರತಿ ಮಗುವಿಗೆ ವರ್ಷಕ್ಕೆ ₹ 16 ಸಾವಿರ ಹಣವನ್ನು ಸರ್ಕಾರ ಖಾಸಗಿ ಶಾಲೆಗಳಿಗೆ ನೀಡುತ್ತಿದೆ. ಈ ಹಣದಲ್ಲಿ ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಸೇರಿರುತ್ತದೆ. ಆದರೆ ಆರ್.ಟಿ.ಇ.ನಿಂದ ಬರುವ ಹಣ ಸಾಲುವುದಿಲ್ಲ. ನೀವು ಶುಲ್ಕ ಪಾವತಿ ಮಾಡದೇ ಇದ್ದರೆ ನಾವು ದಾಖಲಾತಿ ಮಾಡಿಕೊಳ್ಳುವುದಿಲ್ಲ ಎಂದು ಕೆಲವು ಶಿಕ್ಷಣ ಸಂಸ್ಥೆಗಳು ಕಿರುಕುಳ ನೀಡುತ್ತಿರುವ ಬಗ್ಗೆ ಪೋಷಕರು ದೂರು ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಲ್ಲೂಕಿನ 34 ಖಾಸಗಿ ಶಾಲೆಗಳು ಆರ್.ಟಿ.ಇ. ಕಾಯಿದೆಯಡಿಯಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದು, ತಾಲ್ಲೂಕಿನ 1187 ಮಂದಿ ವಿದ್ಯಾರ್ಥಿಗಳು ಆರ್.ಟಿ.ಇ. ಕಾಯಿದೆಯಡಿಯಲ್ಲಿ ವಿವಿಧ ಶಾಲೆಗಳಲ್ಲಿ ಯು.ಕೆ.ಜಿ.ಯಿಂದ 5ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆರ್.ಟಿ.ಇ. ಮಕ್ಕಳಿಂದ ಯಾವುದೇ ಶುಲ್ಕ ಪಡೆಯದಂತೆ ಶಾಲಾ ಆಡಳಿತ ಮಂಡಳಿಗಳಿಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆದರೂ ಆರ್.ಟಿ.ಇ. ಮಕ್ಕಳಿಂದ ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ 3 ತಂಡಗಳನ್ನು ರಚಿಸಲಾಗಿದೆ. ಶಾಲೆಗಳಿಗೆ ಭೇಟಿ ನೀಡಲಿರುವ ತಂಡ ಪರಿಶೀಲನೆ ನಡೆಸಲಿದೆ. ಆರ್.ಟಿ.ಇ. ಮಕ್ಕಳಿಂದ ಶುಲ್ಕ ಪಡೆದಿರುವುದು ಕಂಡು ಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಲೆಗಳು ಪಡೆದ ಶುಲ್ಕವನ್ನು ಸಂಬಂಧಿಸಿದ ಶಾಲೆಗಳಿಗೆ ನೀಡುವ ಆರ್.ಟಿ.ಇ. ಹಣದಿಂದ ಕಡಿತ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.