ADVERTISEMENT

ಚನ್ನಪಟ್ಟಣ: ಪಾಳುಬಿದ್ದ ಮಾಂಸ ಮಾರಾಟ ಕೇಂದ್ರಗಳು, ಸಾರ್ವಜನಿಕರ ತೆರಿಗೆ ಹಣ ಪೋಲು

ಸ್ಥಳಾಂತರಕ್ಕೆ ಮುಂದಾಗುವರೇ ವ್ಯಾಪಾರಿಗಳು?

ಎಚ್.ಎಂ.ರಮೇಶ್
Published 26 ಜನವರಿ 2020, 19:30 IST
Last Updated 26 ಜನವರಿ 2020, 19:30 IST
ಚನ್ನಪಟ್ಟಣದ ಮೂರ್ತಿಮಹಲ್ ರಸ್ತೆಯಲ್ಲಿ ಪಾಳು ಬಿದ್ದಿರುವ ಮಾಂಸ ಮಾರಾಟ ಕೇಂದ್ರ
ಚನ್ನಪಟ್ಟಣದ ಮೂರ್ತಿಮಹಲ್ ರಸ್ತೆಯಲ್ಲಿ ಪಾಳು ಬಿದ್ದಿರುವ ಮಾಂಸ ಮಾರಾಟ ಕೇಂದ್ರ   

ಚನ್ನಪಟ್ಟಣ: ಲಕ್ಷಾಂತರ ರೂಪಾಯಿ ವ್ಯಯಮಾಡಿ ಪಟ್ಟಣದ ಮೂರ್ತಿಮಹಲ್ ರಸ್ತೆ ಹಾಗೂ ಚಿಕ್ಕಮಳೂರಿನಲ್ಲಿ ನಗರಸಭೆ ವತಿಯಿಂದ ನಿರ್ಮಾಣ ಮಾಡಿರುವ ಮಾಂಸ ಮಾರಾಟ ಕೇಂದ್ರಗಳು ಈಗ ಪಾಳು ಬಿದ್ದಿವೆ.

ಸುಸಜ್ಜಿತ ಸ್ಥಳದಲ್ಲಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ 13ನೇ ಹಣಕಾಸು ಯೋಜನೆಯಡಿಯಲ್ಲಿ 2006ರಲ್ಲಿ ಚಿಕ್ಕಮಳೂರು ಸಮೀಪದ ಅನ್ನಪೂರ್ಣೇಶ್ವರಿ ರಸ್ತೆ ಹಾಗೂ 2014ರಲ್ಲಿ ಮೂರ್ತಿಮಹಲ್ ರಸ್ತೆಯಲ್ಲಿ ಮಾಂಸ ಮಾರಾಟ ಕೇಂದ್ರ ನಿರ್ಮಿಸಲಾಗಿದೆ. ಆದರೆ, ವ್ಯಾಪಾರಿಗಳು ಬಳಸದ ಕಾರಣ ತಿಪ್ಪೆಗುಂಡಿಗಳಾಗಿವೆ. ಅಧಿಕಾರಿಗಳು ಸೂಚನೆ ನೀಡಿದರೂ ಸ್ಥಳಾಂತರಕ್ಕೆ ವ್ಯಾ‍ಪಾರಿಗಳು ಮುಂದಾಗುತ್ತಿಲ್ಲ.

ಮಾಂಸದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ರಸ್ತೆಬದಿ ಮತ್ತು ಕೆರೆ ಕಾಲುವೆ ದಂಡೆ ಮೇಲೆ ಸುರಿಯುತ್ತಿರುವುದರಿಂದ ಗಬ್ಬು ನಾರುತ್ತಿದೆ. ನಾಯಿಗಳ ಹಾವಳಿ ಹೆಚ್ಚಾಗಿ ಜನರು ಸಂಚಾರ ಮಾಡದ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ತಿಪ್ಪೆಗುಂಡಿಯಾದ ಮಾರುಕಟ್ಟೆ: ಚಿಕ್ಕಮಳೂರು ಬಳಿ ನಿರ್ಮಿಸಿರುವ ಮಾಂಸದ ಮಾರುಕಟ್ಟೆಗೆ ಯಾರೂ ಸುಳಿಯದ ಪರಿಣಾಮ ಗಿಡಗಂಟಿ ಬೆಳೆದು ಭೂತಬಂಗಲೆಯಾಗಿ ಮಾರ್ಪಟ್ಟಿದೆ. ನಗರಸಭೆ ಗಿಡಗಂಟಿ ಸ್ವಚ್ಚಗೊಳಿಸಿದ ಬಳಿಕ ಕೆಲವು ಪುಂಡರ ಮೋಜು –ಮಸ್ತಿ ತಾಣವಾಗಿದೆ.

ಪಟ್ಟಣದಲ್ಲಿ ಸಂಗ್ರಹವಾಗುವ ಹಸಿಕಸವನ್ನು ಗೊಬ್ಬರವಾಗಿ ಮಾರ್ಪಾಡು ಮಾಡಲು ನಗರಸಭಾ ಅಧಿಕಾರಿಗಳು ಈ ಜಾಗವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಪೋಸ್ಟ್ ಗೊಬ್ಬರ ತಯಾರಿಸಲು ಈ ಸ್ಥಳ ಬಳಕೆ ಮಾಡಿಕೊಳ್ಳುತ್ತಿರುವ ನಗರಸಭೆ, ವೈಜ್ಞಾನಿಕ ವ್ಯವಸ್ಥೆ ಅಳವಡಿಸಿಕೊಳ್ಳದ ಪರಿಣಾಮ ಇಡೀ ಪ್ರದೇಶ ಕೊಳಚೆಗುಂಡಿಯಾಗಿ ಪರಿಣಮಿಸಿದೆ. ಸೊಳ್ಳೆ, ನೊಣ ಮೊದಲಾದ ಕ್ರಿಮಿಕೀಟಗಳು ಹೆಚ್ಚುತ್ತಿವೆ ಎಂದು ಇಲ್ಲಿನ ನಿವಾಸಿಗಳಾದ ನಾಗರಾಜು, ಮಂಜುನಾಥ್, ಜಯರಾಮು ಆರೋಪಿಸುತ್ತಾರೆ.

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಮಾಡಿರುವ ಮಾಂಸದ ಮಾರುಕಟ್ಟೆ ಕೇಂದ್ರಗಳನ್ನು ವ್ಯಾಪಾರಿಗಳು ಬಳಸಬೇಕು ಹಾಗೂ ನಗರದ ಸ್ವಚ್ಛತೆ ಉಳಿಸಲು ನಗರಸಭೆ ಮುಂದಾಗಬೇಕೆಂದು ಇಲ್ಲಿನ ನಿವಾಸಿಗಳಾದ ಕೆಂಪರಾಜು, ಶ್ರೇಯಸ್, ಕಾರ್ತಿಕ್ ಆಗ್ರಹಿಸುತ್ತಾರೆ.

ಪಾಳುಬಿದ್ದ ದೊಡ್ಡ ಕಟ್ಟಡ: ಪಟ್ಟಣದ ಮೂರ್ತಿಮಹಲ್ ರಸ್ತೆಯಲ್ಲಿ ನಗರಸಭೆ 2014ರಲ್ಲಿ ನಿರ್ಮಿಸಿರುವ ಮಾಂಸ ಮಾರಾಟದ ದೊಡ್ಡ ಕಟ್ಟಡ ಐದು ವರ್ಷದಿಂದ ಪಾಳುಬಿದ್ದಿದೆ. ಇಲ್ಲಿ ಹತ್ತಾರು ಅಂಗಡಿಗಳಿದ್ದು, ವ್ಯವಸ್ಥಿತವಾಗಿ ನಿರ್ವಹಿಸಿದರೆ ಪಟ್ಟಣದ ಎಲ್ಲೆಡೆ ಇರುವ ಮಾಂಸದ ಅಂಗಡಿಗಳನ್ನು ಇಲ್ಲಿಗೆ ಸ್ಥಳಾಂತರಿಸಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ನಗರಸಭೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಕಟ್ಟಡ ಪಾಳು ಬೀಳುವಂತಾಗಿದೆ. ಅಲ್ಲದೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ ಎಂದು ಸ್ಥಳೀಯರಾದ ಮಧು, ಮಂಚಮ್ಮ, ಸೈಯದ್ ವಾಸಿಂ ಅವರ ದೂರು. ಈ ಕಟ್ಟಡಕ್ಕೆ ಕಲ್ಪಿಸಿರುವ ಸೌಲಭ್ಯಗಳನ್ನು ಕಳವು ಮಾಡಲಾಗಿದೆ. ಈ ಕಟ್ಟಡಕ್ಕೆ ಯಾವುದೇ ಭದ್ರತೆ ಇಲ್ಲ ಎನ್ನುತ್ತಾರೆ ಯಾಕೂಬ್, ನೂರುಲ್ಲಾ, ಮಹದೇವ.

ರಸ್ತೆ ಬದಿಯಲ್ಲೇ ಮಾಂಸ ಮಾರಾಟ: ಪಟ್ಟಣದ ಚಿಕ್ಕಮಳೂರು, ಜೆಸಿ ರಸ್ತೆ, ರೈಲ್ವೆ ಗೇಟ್, ಸಾತನೂರು ಸರ್ಕಲ್, ಪೇಟೆ ಬೀದಿ, ರೈಲ್ವೆ ಸ್ಟೇಷನ್ ರಸ್ತೆ, ಮೂರ್ತಿಮಹಲ್ ರಸ್ತೆ, ಮಂಡಿಪೇಟೆ ರಸ್ತೆ, ಷೇರು ಹೋಟೆಲ್ ಸರ್ಕಲ್, ಚರ್ಚ್ ರಸ್ತೆ ಸೇರಿದಂತೆ ಪಟ್ಟಣದೆಲ್ಲೆಡೆ ರಸ್ತೆ ಬದಿಯಲ್ಲಿಯೇ ಮಾಂಸ ಮಾರಾಟ ಅಂಗಡಿಗಳಿವೆ ಎಂದು ಸಾರ್ವಜನಿಕರಾದ ಮೋಹನ್, ರವೀಂದ್ರ ಮತ್ತು ಅನಿಲ್ ಅವರ ಆರೋ‍ಪ.

ಈ ಮಾಂಸ ಮಾರಾಟ ಅಂಗಡಿಗಳನ್ನು ಸ್ಥಳಾಂತರ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ತೂಕದಲ್ಲೂ ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ನಗರವಾಸಿಗಳಾದ ನಿಂಗೇಗೌಡ, ರಘು, ಬೀರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.