ಚನ್ನಪಟ್ಟಣ: ಬೆಳ್ಳಿತೆರೆಯಲ್ಲಿ ಬೆಳಗಿ ಮರೆಯಾದ ನಾಡಿನ ಹೆಮ್ಮೆಯ ಅಭಿನೇತ್ರಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ ಚನ್ನಪಟ್ಟಣದ ಗಾಂಧಿಭವನದ ಬಳಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.
ಅಂತ್ಯಕ್ರಿಯೆಗೆ ತಾಲ್ಲೂಕಿನ ದಶಾವರ ಗ್ರಾಮಕ್ಕೆ ಕೊಂಡೊಯ್ಯವ ಮಾರ್ಗಮಧ್ಯೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಸಾವಿರಾರು ಮಂದಿ ಅಭಿಮಾನಿಗಳು, ಸಾರ್ವಜನಿಕರು, ರಾಜಕಾರಣಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಕಲಾವಿದರು, ಮಹಿಳೆಯರು ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.
ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ಸಾರ್ವಜನಿಕ ದರ್ಶನಕ್ಕೆ ಮೃತದೇಹವನ್ನು ಇಡಲಾಗಿತ್ತು. ಈ ವೇಳೆ ಶಾಸಕ ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಮುಖಂಡರಾದ ದುಂತೂರು ವಿಶ್ವನಾಥ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್, ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನೀಲ್, ಮುಖಂಡರಾದ ಪವಿತ್ರಾ ಪ್ರಭಾಕರ್ ರೆಡ್ಡಿ, ಶಾರದಾ ಗೌಡ, ಕೆ.ಟಿ. ಲಕ್ಷ್ಮಮ್ಮ, ವಿ.ಬಿ.ಚಂದ್ರು, ವಿವಿಧ ಪಕ್ಷಗಳ ಮುಖಂಡರು, ಕಲಾವಿದರು ಸೇರಿದಂತೆ ಹಲವಾರು ಮಂದಿ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು.
ನಂತರ ಮೃತದೇಹವನ್ನು ತಿಟ್ಟಮಾರನಹಳ್ಳಿ ಮಾರ್ಗವಾಗಿ ದಶವಾರ ಗ್ರಾಮದ ಕಡೆಗೆ ಕೊಂಡೊಯ್ಯಲಾಯಿತು. ದಶಾವರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಧ್ಯಾಹ್ನ 3.30ರ ಸುಮಾರಿಗೆ ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಪುತ್ರ ಗೌತಮ್ ಅಂತಿಮ ವಿಧಿ ವಿಧಾನ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.