
ಮಾಗಡಿ ತಾಲ್ಲೂಕಿನ ಮಾಡಬಾಳ್ ಸರ್ಕಾರಿ ಪ್ರೌಢಶಾಲೆಗೆ ಆಧುನಿಕ ಸ್ಪರ್ಶ ನೀಡಿದ ಯುವಕರ ತಂಡ
ಮಾಗಡಿ: ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಕನ್ನಡ ಸ್ವಯಂಸೇವಾ ಸಂಘದ ಯುವಕರು ವಿಭಿನ್ನ ಪ್ರಯತ್ನಯದಲ್ಲಿ ತೊಡಗಿದ್ದಾರೆ. ದುಡಿಮೆ ಸ್ವಂತ ಹಣ ಹಾಗೂ ದಾನಿಗಳ ಸಹಾಯದಿಂದ ಶಿಥಿಲಾವಸ್ಧೆಯಲ್ಲಿರುವ ಶತಮಾನದ ಶಾಲೆಗಳಿಗೆ ಆಧುನಿಕ ಸ್ಪರ್ಶ ನೀಡಿ ಮೂಲ ಸೌಲಭ್ಯ ಕೊಡುವ ಕೆಲಸವನ್ನು ಸ್ವಯಂಸೇವಾ ಸಂಘ ಮಾಡುತ್ತಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸರ್ಕಾರಿ ಶಾಲೆಗಳನ್ನು ಉಳಿಯುವ ನಿಟ್ಟಿನಲ್ಲಿ ಕನ್ನಡ ಸ್ವಯಂಸೇವಾ ಸಂಘದ 25ಕ್ಕೂ ಹೆಚ್ಚು ಯುವಕರ ತಂಡ ರಾಜ್ಯದಾದ್ಯಂತ ಇಲ್ಲಿವರೆಗೂ 18ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣದ ಜೊತೆಗೆ ಮಕ್ಕಳಿಗೆ ಆಕರ್ಷಣೀಯವಾಗಿ ಕಾಣುವ ನಿಟ್ಟಿನಲ್ಲಿ ಕನ್ನಡ ಕವಿಗಳು, ಪ್ರಖ್ಯಾತ ವ್ಯಕ್ತಿಗಳ ಭಾವಚಿತ್ರವನ್ನು ಗೋಡೆಗಳ ಮೇಲೆ ಚಿತ್ತಾರ ಬಿಡಿಸಿ ಮಕ್ಕಳು ಶಾಲೆಯಲ್ಲಿ ಕಲಿಯಲು ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ.
ಜೊತೆಗೆ ಮೂಲ ಸೌಲಭ್ಯಗಳಾದ ಶೌಚಾಲಯ, ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಕ್ರೀಡಾ ಸಾಮಗ್ರಿ ಶಾಲೆಗೆ ಕೊಡುವ ಮೂಲಕ ಖಾಸಗಿ ಶಾಲೆಗೆ ಪೈಪೋಟಿ ಕೊಡುವ ಕೆಲಸವನ್ನು ಸ್ವಯಂಸೇವಾ ಸಂಘ ಮಾಡುತ್ತಿದೆ. ಮಾಗಡಿಯಲ್ಲಿ ಎರಡನೇ ಶಾಲೆಯಾಗಿ ತಾಲ್ಲೂಕಿನ ಮಾಡಬಾಳ್ ಪ್ರೌಢಶಾಲೆಗೆ ಸ್ವಯಂಸೇವಾ ಸಂಘ ಆಧುನಿಕ ಸ್ಪರ್ಶ ನೀಡಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಸ್ವಯಂಸೇವಾ ಸಂಘ ಮಾಡುವ ಮೂಲಕ ಮಾದರಿ ನಡೆಯನ್ನು ಅನುಸರಿಸಿದೆ.
ಒಂದು ಲಕ್ಷ ವೆಚ್ಚದಲ್ಲಿ ಶಾಲೆಗೆ ಸುಣ್ಣ-ಬಣ್ಣ: ತಾಲ್ಲೂಕಿನ ಮಾಡಬಾಳ್ ಶತಮಾನ ಪೂರೈಸಿರುವ ಸರ್ಕಾರಿ ಪ್ರೌಢಶಾಲೆಗೆ ಸ್ವಯಂಸೇವಾ ಸಂಘದ ಯುವಕರು ತಾವು ದುಡಿದ ದುಡಿಮೆಯಲ್ಲಿ ಶೇ25ರಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಇದರ ಜತೆಗೆ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಾಯದಿಂದ ₹1ವೆಚ್ಚದಲ್ಲಿ ಸುಣ್ಣ ಬಣ್ಣ ಖರೀದಿ ಮಾಡಿ ಶಾಲೆ ಎಲ್ಲ ಕೊಠಡಿಗಳಿಗೂ ಬಣ್ಣ ಬಳೆದು ಆಧುನಿಕ ಸ್ಪರ್ಶ ನೀಡಲಾಗಿದೆ. ಸಾಕಷ್ಟು ಶಿಥಿಲಾವಸ್ಧೆಯಲ್ಲಿದ್ದ ಕಟ್ಟಡ ಈಗ ಆಧುನಿಕ ಸ್ಪರ್ಶ ಸಿಕ್ಕಿದೆ. ಮಕ್ಕಳಿಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನೂರಾರು ಕನ್ನಡ ಸ್ವಯಂ ಸೇವಕರ ಟೀಂ ಕಟ್ಟಲಾಗಿದೆ. ಎರಡು ದಿನ ಶಾಖೆಯಲ್ಲೇ ಉಳಿದುಕೊಂಡು ಕನ್ನಡ ಶಾಲೆಗಳಿಗೆ ಅವಶ್ಯ ಇರುವ ಮೂಲ ಸೌಕರ್ಯಗಳಾದ ಕ್ರೀಡಾ ಸಾಮಗ್ರಿ, ಪುಸ್ತಕಗಳನ್ನು ನೀಡಲಾಗಿದೆ. ಮಾಸಿ ಹೋಗಿರುವ ಹಳೆ ಕಟ್ಟಡಗಳಿಗೆ ಸುಣ್ಣ ಬಣ್ಣ ಮಾಡಲಾಗಿದೆ. ಶಾಲೆ ಗೋಡೆಗಳ ಮೇಲೆ ಕನ್ನಡ ನಾಡಿನ ಮಹನೀಯರ ಚಿತ್ರಗಳನ್ನು ಬಿಡಿಸಿ ಶಾಲೆಗೆ ಹೊಸ ರೂಪ ನೀಡಲಾಗಿದೆ. ಇನ್ನು ಮುಂದೆ ಮಾಗಡಿ ಕೆಂಪೇಗೌಡರ ನಾಡಿನಲ್ಲಿ ಅವಶ್ಯ ಇರುವ ಎಲ್ಲ ಶಾಲೆಗಳನ್ನು ಭೇಟಿ ಮಾಡಿ ಅವಶ್ಯ ಇರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಈ ಅಭಿಯಾನ ವಿಸ್ತರಿಸಲು ಯೋಜನೆ ರೂಪಿಸಿಕೊಂಡಿದೆ.
ಅಭಿಯಾನದಲ್ಲಿ ಕಲಾವಿದ ಯಲ್ಲಪ್ಪ, ನವೀನ್ ಸಿಂಗ್, ಜಿತೇಂದ್ರ, ಅಭಿ, ಸಂತೋಷ ಕೊತ್ತಲ್, ಶ್ವೇತಾ, ಎನ್.ಎಸ್.ಮೂರ್ತಿ, ಹನುಮಂತ ರಾಜು, ಡಿ.ಎಸ್.ರಾಜು, ಕೆಂಪಸಾಗರ ಸಂಜಯ, ಶಶಿಧರ್, ಕಾರ್ತಿಕ್ ಕನ್ನಡಿಗ, ಗೋಪಾಲ್, ಪ್ರಜ್ವಲ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕನ್ನಡ ಭಾಷೆ ಉಳಿಸಲು ಕ್ರಮ ಕನ್ನಡ ಸ್ವಯಂ ಸೇವಕರ ಸಂಘ ಕೆಎಸ್ಎಸ್ ನಮ್ಮ ಮಾಗಡಿ ವತಿಯಿಂದ ಕನ್ನಡ ಭಾಷೆ ಉಳಿಸಲು ಕನ್ನಡ ಶಾಲೆಗಳನ್ನು ಉಳಿಸುವುದು ಬೆಳೆಸುವುದು ಬಹು ಮುಖ್ಯ ಕರ್ತವ್ಯ. ಈಗ ಕೆಎಸ್ಎಸ್ ವತಿಯಿಂದ ಕನ್ನಡ ಶಾಲೆ ಉಳಿಸಿ ಅಭಿಯಾನ ಆರಂಭ ಮಾಡಲಾಗಿದೆ. ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವ ಕನ್ನಡ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.ವಿದ್ಯಾರ್ಥಿ ಮಿತ್ರ ರವಿಕಿರಣ್ ಕನ್ನಡ ಸ್ವಯಂ ಸೇವಕ ಸಂಘ ಅಧ್ಯಕ್ಷ
ಅನುದಾನ ಬಿಡುಗಡೆ ಮಾಡಬೇಕು ಸರ್ಕಾರ ಕಟ್ಟಡ ರಿಪೇರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಈಗ ಸಾಕಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ಇವೆ. ಮೂಲ ಸೌಲಭ್ಯಗಳಿಗೆ ಮೊದಲ ಆದ್ಯತೆ ಕೊಡಬೇಕು. ಸ್ವಯಂಸೇವಾ ಸಂಘದಿಂದ ಅತಿ ದುರಸ್ತಿಯಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದೆ.ಸಂಜಯ್ ಸಂಚಾಲಕ ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.