ಹಾರೋಹಳ್ಳಿ: ಮಳೆ ಬಂದರೆ ಸೋರುವ ಕಟ್ಟಡ, ಚಾವಣಿ ಕುಸಿಯುವ ಆತಂಕದಲ್ಲಿ ಕೆಪಿಎಸ್ ಶಾಲೆ ಮಕ್ಕಳಿದ್ದಾರೆ. ಆದರೆ, ಶಾಲೆ ಆವರಣದಲ್ಲಿ ಕಟ್ಟಡ ನಿರ್ಮಿಸಿ ತಿಂಗಳು ಕಳೆದರೂ ಅವುಗಳನ್ನು ಬಳಕೆಗೆ ನೀಡದೆ ಅಧಿಕಾರಿಗಳು ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.
ಹಾರೋಹಳ್ಳಿ ಕೆಪಿಎಸ್ ಶಾಲೆಯಲ್ಲಿ 1600ಕ್ಕೂ ಅಧಿಕ ಮಂದಿ ಕಲಿಯುತ್ತಿದ್ದಾರೆ. ಈ ನಡುವೆ ಮಕ್ಕಳಿಗೆ ಉಪಯೋಗವಾಗಲೆಂದು 11ರೂಂಗಳಿರುವ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಣ ನಿರ್ಮಾಣ ಪೂರ್ಣಗೊಂಡು ತಿಂಗಳು ಕಳೆದರೂ ಮಕ್ಕಳ ಬಳಕೆಗೆ ಮಾತ್ರ ನೀಡಿಲ್ಲ.
ಪ್ರಾಣ ಭಯದಲ್ಲೇ ಕಲಿಕೆ: ಇಲ್ಲಿನ ಮಕ್ಕಳು ಹಲವು ವರ್ಷಗಳಿಂದ ಎಲ್ಲಿ ಚಾವಣಿ ಕುಸಿದು ಬೀಳುವುದೋ ಎಂಬ ಆತಂಕದಲ್ಲಿ ಪಾಠ ಕಲಿಯುತ್ತಿದ್ದಾರೆ. ಮಕ್ಕಳು ಅಪಾಯದಲ್ಲಿರುವುದು ಜಿಲ್ಲೆಯ ಎಲ್ಲ ಹಂತದ ಅಧಿಕಾರಿಗಳಿಗೂ ತಿಳಿದಿದೆ. ಆದರೆ, ಯಾರೊಬ್ಬರೂ ಮಕ್ಕಳ ಬಗ್ಗೆ ಕಿಂಚಿತ್ತು ಕರುಣೆ ತೋರುತ್ತಿಲ್ಲ. ನಿರ್ಮಾಣವಾಗಿರುವ ಕಟ್ಟಡವನ್ನು ಬಳಕೆಗೆ ನೀಡಿ ಮಕ್ಕಳ ಹಿತ ಕಾಯಬೇಕಾದ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಕರುಣೆಯೇ ಇಲ್ಲವೇ: ಸರ್ಕಾರಿ ಶಾಲೆ ಎಂದರೆ ಮೊದಲೇ ಮೂಗು ಮುರಿಯುವವರೇ ಹೆಚ್ಚು. ಹೀಗಿರ ಬೇಕಾದರೆ ಈ ಶಾಲೆಯಲ್ಲಿ 1600ಕ್ಕೂ ಅಧಿಕ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಮಕ್ಕಳ ಹಾಗೂ ಪೋಷಕರ ಉತ್ಸಾಹ ಕಂಡು ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸಿಕೊಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಸರ್ಕಾರ ಅನುದಾನ ನೀಡಿ ಇನ್ನೊಂದಷ್ಟು ಕೊಠಡಿ ನಿರ್ಮಿಸಿಕೊಟ್ಟರೆ ಪೂರ್ಣ ಪ್ರಮಾಣದಲ್ಲಿ ಅನುಕೂಲವಾಗಲಿದೆ.
ಸಂಬಂಧಪಟ್ಟವರು ಗಮನಹರಿಸಿ ಕೂಡಲೇ ಕೊಠಡಿಗಳನ್ನು ನಿರ್ಮಿಸಿಕೊಟ್ಟರೆ ಬಡ ಮಕ್ಕಳಿಗೆ ಅನು ಕೂಲವಾಗಲಿದೆ.
ಹಾರೋಹಳ್ಳಿ ಕೆಪಿಎಸ್ ಶಾಲೆಯಲ್ಲಿ 11ಕೊಠಡಿಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಆದರೆ, ಬಳಕೆಗೆ ನೀಡುತ್ತಿಲ್ಲ. ಅವುಗಳ ನಿರ್ಮಾಣ ಬಗ್ಗೆಯೂ ಅಧಿಕಾರಿಗಳು ತಲೆಕೆಡಿಸಿಕೊಳ್ಳಬೇಕಿದೆ.ರಾಘವೇಂದ್ರ, ಎಸ್.ಡಿ.ಎಂ.ಸಿ ಅಧ್ಯಕ್ಷ, ಕೆಪಿಎಸ್ ಶಾಲೆ ಹಾರೋಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.