ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಹಿರಿಯ ನಾಗರಿಕರನ್ನು ಸನ್ಮಾನಿಸಿದರು.
ರಾಮನಗರ: ‘ಹಿರಿಯ ನಾಗರಿಕರ ಅನುಕೂಲಕ್ಕಾಗಿ ₹5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಭವನ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ವಿಶ್ರಾಂತ ಜೀವನ ನಡೆಸುವ ಹಿರಿಯರಿಗೆ ಮನರಂಜನೆ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳನ್ನು ಆ ಕಟ್ಟಡದಲ್ಲಿ ಹಮ್ಮಿಕೊಳ್ಳುವ ಆಲೋಚನೆ ಇದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರು, ನಿವೃತ್ತ ನೌಕರರ ಸಂಘಗಳು, ಕರ್ನಾಟಕ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಹಾಗೂ ಹಿರಿಯ ನಾಗರಿಕರ ಏಳಿಗೆಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿರಿಯರು ಇಳಿ ವಯಸ್ಸಿನಲ್ಲಿ ಸಂತೋಷದಿಂದ ಜೀವನ ಸಾಗಿಸಬೇಕು. ಅದಕ್ಕೆ ಅನುಕೂಲವಾಗುವಂತೆ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು, ನೋವು– ನಲಿವು ಹಂಚಿಕೊಳ್ಳಲು, ಎಲ್ಲರೂ ಒಂದೆಡೆ ಸೇರಿ ಚರ್ಚಿಸುವ, ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಟ್ಟಡದ ಅಗತ್ಯವಿದೆ’ ಎಂದರು.
‘ಸುಮಾರು ₹5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಕ್ರೋಢಿಕರಿಸಲು ಜಿಲ್ಲಾ ಪಂಚಾಯಿತಿಗೆ ಸೂಚಿಸಲಾಗಿದೆ. ಇತ್ತೀಚೆಗೆ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಹೆಚ್ಚಾಗಿದೆ. ಅದನ್ನು ತಪ್ಪಿಸಬೇಕು. ಅವರನ್ನು ತಮ್ಮ ಬಳಿಯೇ ಇಟ್ಟುಕೊಂಡು ಸೇವೆ ಮಾಡಬೇಕು. ಆಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ದಿನೇಶ್ ಸ್ವಾಗತಿಸಿದರು. ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಜಿಲ್ಲಾಧಿಕಾರಿ ಕಚೇರಿ ಸಹಾಯಕ ನಿರ್ದೇಶಕ ಜಯಂತ್, ಸಮಾಜ ಸೇವಕರಾದ ಜಯಮ್ಮ, ಹುಚ್ಚಪ್ಪ, ಕಾಡಯ್ಯ, ಕಾಳಪ್ಪ ವೇದಿಕೆಯಲ್ಲಿದ್ದರು.
ಸೌಲಭ್ಯ ತಲುಪಿಸಲು ಸೂಚನೆ
‘ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಹಿರಿಯರ ಯೋಗಕ್ಷೇಮಗಳನ್ನು ವಿಚಾರಿಸುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳು ದೊರಕುತ್ತಿರುವ ಬಗ್ಗೆ ಪರಿಶೀಲಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸುವ ಕೆಲಸಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕು. ಅಂಗವಿಕಲರನ್ನು ಗುರುತಿಸಿ ಅವರಿಗೆ ಅಗತ್ಯ ಸಾಧನ– ಸಲಕರಣೆಗಳನ್ನು ವಿತರಿಸಬೇಕು’ ಎಂದು ಶಾಸಕ ಹುಸೇನ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.