ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ವರ್ಷದ ಹಿಂದೆ 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕಿವಿಯೋಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹24 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಮದ್ದೂರಿನ ರುದ್ರಾಕ್ಷಿಪುರದ ಪುನೀತ್ ಅಲಿಯಾಸ್ ಪುನಿ (30) ಶಿಕ್ಷೆಗೊಳಗಾದ ಅಪರಾಧಿ. 2020ರ ಜುಲೈ 28ರಂದು ಬಾಲಕಿ ಅಂಗಡಿಯಿಂದ ತಿಂಡಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದಳು. ಆಗ ಆಕೆಗೆ ಎದುರಾಗಿದ್ದ ಆರೋಪಿ, ‘ನಿಮ್ಮ ತಂದೆ ಕರೆಯುತ್ತಿದ್ದಾರೆ. ಅವರ ಬಳಿಗೆ ಹೋಗೋಣ ಬಾ’ ಎಂದು ಹೇಳಿ ತನ್ನ ಸ್ಕೂಟರ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ.
ಪ್ರತಿರೋಧ ಲೆಕ್ಕಿಸದೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ, ನಂತರ ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಮನೆಗೆ ಬಂದಿದ್ದ ಬಾಲಕಿ ಘಟನೆ ಕುರಿತು ಕುಟುಂಬದವರಿಗೆ ವಿಷಯ ತಿಳಿಸಿದ್ದರು. ನಂತರ ಅವರ ಠಾಣೆಗೆ ದೂರು ಕೊಟ್ಟಿದ್ದರು.
ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿತ್ತು. ಖಚಿತ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಎಂ. ಪಂಚಾಕ್ಷರಿ ಅವರು ಆರೋಪಿ ವಿರುದ್ಧದ ಅಪರಾಧ ಸಾಬೀತಾಗಿದ್ದರಿಂದ 20 ವರ್ಷ ಜೈಲು ಶಿಕ್ಷೆ ಹಾಗೂ ₹24 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲೆ ಎನ್. ವೀಣಾ ಕುಮಾರಿ ವಾದ ಮಂಡಿಸಿದ್ದರು. ಪ್ರಕರಣದ ಸಹಾಯಕ ತನಿಖಾಧಿಕಾರಿಯಾಗಿ ಸದ್ಯ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿರುವ ರಾಜ ಎನ್. ಅವರು ಕಾರ್ಯನಿರ್ವಹಿಸಿದ್ದರು.
ಗಾರ್ಮೆಂಟ್ಸ್ ವಾಹನದ ಚಾಲಕನಾಗಿದ್ದ ಪುನೀತ್, ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಪ್ರಕರಣದಲ್ಲಿ ಆತನನ್ನು ಬಂಧಿಸಿದಾಗ ಹತ್ತಕ್ಕೂ ಹೆಚ್ಚು ಬೈಕ್‌ಗಳನ್ನು ಕದ್ದಿರುವುದು ತನಿಖೆಯಿಂದ ಗೊತ್ತಾಗಿತ್ತು. ಪುನೀತ್ ಐದು ವರ್ಷಗಳಿಂದ ಜೈಲಿನಲ್ಲಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.