ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಹೂಳು ತೆಗೆಯುವ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಚಾಲನೆ ನೀಡಿದರು.
ಒತ್ತುವರಿ ಹಾಗೂ ಕಲುಷಿತದಿಂದ ನಲುಗಿರುವ ಶೆಟ್ಟಿಹಳ್ಳಿ ಕೆರೆಗೆ ಮರುಜೀವ ನೀಡುವ ಉದ್ದೇಶದಿಂದ ಸುಮಾರು ₹1.30 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ರಾಜ್ಯ ಉಪ ಲೋಕಾಯುಕ್ತ ಫಣೀಂದ್ರ ಅವರು ಈಚೆಗೆ ತಾಲ್ಲೂಕಿನ ಕೆರೆಗಳ ಒತ್ತುವರಿ ವೀಕ್ಷಣೆಗೆ ಆಗಮಿಸಿದ್ದ ವೇಳೆ ಶೆಟ್ಟಿಹಳ್ಳಿ ಕೆರೆಯನ್ನು ವೀಕ್ಷಿಸಿ ಕೆರೆಯಲ್ಲಿ ತುಂಬಿರುವ ಜೋಂಡು, ಹೂಳನ್ನು ನೋಡಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡು, ಎರಡು ತಿಂಗಳೊಳಗೆ ಕೆರೆ ಸ್ವಚ್ಛತೆಗೆ ಗಡುವು ನೀಡಿದ್ದರು. ಅದರಂತೆ ಎಚ್ಚೆತ್ತ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ನಗರಸಭೆ ಈಗ ಕೆರೆ ಸ್ವಚ್ಛತೆಗೆ ಮುಂದಾಗಿವೆ.
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ 117 ಕೆರೆಗಳನ್ನು ಸ್ವಚ್ಛಮಾಡಿ ‘ಲೇಕ್‌ಮ್ಯಾನ್’ ಎಂದು ಪ್ರಸಿದ್ಧಿ ಗಳಿಸಿರುವ ಡಾ.ಆನಂದ್ ಮಲ್ಲಿಗವಾಡ್ ಅವರ ನೇತೃತ್ವದಲ್ಲಿ ಆರಂಭವಾಗಿರುವ ಶೆಟ್ಟಿಹಳ್ಳಿ ಕೆರೆ ಸ್ವಚ್ಛತೆ ಮುಂದಿನ ಒಂದೂವರೆ ತಿಂಗಳಲ್ಲಿ ಪೂರ್ಣವಾಗಲಿದೆ. ಕೆರೆ ಸ್ವಚ್ಛತೆಗೆ ಸಿಎಸ್‌ಆರ್ ಅನುದಾನ ಹಾಗೂ ಸ್ಥಳೀಯ ನಗರಸಭೆ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಶೆಟ್ಟಿಹಳ್ಳಿ ಕೆರೆ ಸ್ವಚ್ಛತೆಗೆ ಚಾಲನೆ ನೀಡಲಾಗಿದೆ. ಆದರೆ, ಈಗ ಇರುವ ಅನುದಾನ ಬಳಸಿಕೊಂಡು ಕೆರೆ ಸ್ವಚ್ಛಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಅನುದಾನ ಸಂಗ್ರಹಿಸಿ ಉಳಿದ ಕಾಮಗಾರಿ ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಪೌರಾಯುಕ್ತ ಮಹೇಂದ್ರ, ತಹಶೀಲ್ದಾರ್ ಗಿರೀಶ್, ಲೇಕ್ ಮ್ಯಾನ್ ಡಾ.ಆನಂದ್ ಮಲ್ಲಿಗವಾಡ್, ನಗರಸಭಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.