ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆ ಒತ್ತುವರಿಯಾಗಿರುವ ಜಾಗವನ್ನು ಯಾವುದೇ ಮುಲಾಜಿಗೆ ಒಳಗಾಗದೆ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ಶೆಟ್ಟಿಹಳ್ಳಿ ಕೆರೆಯ ಸ್ವಚ್ಛತೆ ಹಾಗೂ ಪುನರುಜ್ಜೀವನ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೆರೆ ಸ್ವಚ್ಛಗೊಳಿಸಿ ಕಾಯಕಲ್ಪ ಮಾಡುವುದು ಅಷ್ಟೆ ನಮ್ಮ ಉದ್ದೇಶವಲ್ಲ. ಕೆರೆ ಜಾಗವನ್ನು ಸರ್ವೆ ನಡೆಸಿ ಗಡಿ ಗುರುತಿಸಿ, ಒತ್ತುವರಿ ತೆರವು ಮಾಡುವುದು ಸಹ ನಮ್ಮ ಜವಾಬ್ದಾರಿ. ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಈಗಾಗಲೇ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೆರೆ ಒತ್ತುವರಿ ಮಾಡಿಕೊಂಡಿರುವ ಕೆಲವರು ಜಾಗ ನಮಗೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಂತಹ ಪ್ರಕರಣಗಳನ್ನು ಸಮರ್ಥವಾಗಿ ಮುಕ್ತಾಯಗೊಳಿಸಿ ಶೀಘ್ರ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲು ಸೂಚಿಸಲಾಗಿದೆ. ಶೀಘ್ರ ಈ ಕಾರ್ಯವನ್ನು ಆರಂಭಿಸಲಾಗುವುದು ಎಂದರು.
ಶೆಟ್ಟಿಹಳ್ಳಿ ಕೆರೆ ಜೊತೆಗೆ ನಗರದ ಹೊರವಲಯದ ರಾಮಮ್ಮನ ಕೆರೆ ಏರಿಯ ಸುತ್ತಲೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮೂಲಕ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು. ಕೆರೆ ಏರಿ ಸುತ್ತಲೂ ವಾಕಿಂಗ್ ಪಥ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಇದರಿಂದ ನಗರದ ವಾಯುವಿಹಾರಿಗಳಿಗೆ ಅನುಕೂಲವಾಗುತ್ತದೆ ಎಂದರು.
ಕಾಮಗಾರಿ ಆದಷ್ಟು ಶೀಘ್ರ ಮುಕ್ತಾಯವಾಗುತ್ತದೆ. ಅನುದಾನಕ್ಕೆ ಯಾವುದೇ ಕೊರತೆಯಿಲ್ಲ. ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ವಾಸಿಲ್ ಅಲಿಖಾನ್, ಪೌರಾಯುಕ್ತ ಮಹೇಂದ್ರ, ಸದಸ್ಯರು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.