ADVERTISEMENT

ದುರ್ವಾಸನೆ ಬೀರುತ್ತಿರುವ ಶೆಟ್ಟಿಹಳ್ಳಿ ಕೆರೆ

ಚನ್ನಪಟ್ಟಣ ವಾಸಿಗಳಿಗೆ ನರಕಯಾತನೆ*ವಿದ್ಯಾರ್ಥಿಗಳಿಗೂ ತೊಂದರೆ

ಎಚ್.ಎಂ.ರಮೇಶ್
Published 16 ಡಿಸೆಂಬರ್ 2018, 14:00 IST
Last Updated 16 ಡಿಸೆಂಬರ್ 2018, 14:00 IST
ಚನ್ನಪಟ್ಟಣದ ಹೃದಯಭಾಗದಲ್ಲಿ ಇರುವ ಶೆಟ್ಟಿಹಳ್ಳಿ ಕೆರೆಯ ಅಂಗಳದಲ್ಲಿ ಜೊಂಡು ಬೆಳೆದುಕೊಂಡಿರುವುದು
ಚನ್ನಪಟ್ಟಣದ ಹೃದಯಭಾಗದಲ್ಲಿ ಇರುವ ಶೆಟ್ಟಿಹಳ್ಳಿ ಕೆರೆಯ ಅಂಗಳದಲ್ಲಿ ಜೊಂಡು ಬೆಳೆದುಕೊಂಡಿರುವುದು   

ಚನ್ನಪಟ್ಟಣ: ಪಟ್ಟಣದ ಹೃದಯಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆಯು ನೀರಿನ ನೆಲೆಯೆ ಕಾಣದಂತೆ ತನ್ನೊಡಲಲ್ಲಿ ಜೊಂಡು ಬೆಳೆಸಿಕೊಂಡು, ನಗರದ ಕೊಳಚೆ ನೀರನ್ನೆಲ್ಲಾ ತನ್ನ ಗರ್ಭದಲ್ಲಿರಿಸಿಕೊಂಡು ನಲುಗುತ್ತಿದೆ.

ಸುಮಾರು 60 ಎಕರೆ ಪ್ರದೇಶದಲ್ಲಿ ಇದು ವ್ಯಾಪಿಸಿದೆ. ಕೆರೆಯೋ ಅಲ್ಲವೋ ಅನ್ನುವಂತಾಗಿದ್ದು, ದುರ್ವಾಸನೆ ಬೀರುತ್ತಾ ದಿನನಿತ್ಯ ನರಕಯಾತನೆ ನೀಡುತ್ತಿದೆ.

ಪಟ್ಟಣದ ಕಸದ ತಾಣವಾಗಿರುವ ಇದರ ಸುತ್ತಲೂ ಇರುವ ಪೊದೆಗಳು ಕಳ್ಳಕಾಕರ, ಅನೈತಿಕ ಚಟುವಟಿಕೆಗಳಿಗೆ ಪ್ರಶಸ್ತ ತಾಣವಾಗಿದೆ. ದುರ್ವಾಸನೆಯ ಜೊತೆಗೆ ಸೊಳ್ಳೆ, ಹಾವುಗಳ ವಾಸಸ್ಥಾನವಾಗಿ ಮಾರ್ಪಟ್ಟ ಕಾರಣ ನಿವಾಸಿಗಳಿಗೆ ನೆಮ್ಮದಿಯ ಜೀವನ ಮರೀಚಿಕೆಯಾಗಿದೆ.

ADVERTISEMENT

ಕೆರೆಯ ಪಕ್ಕದಲ್ಲಿಯೇ ಇರುವ ಚೆನ್ನಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದನ್ನು ಸಹಿಸಿಕೊಂಡು ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.

ವಾಸ ಮಾಡಲಾಗದ ಸ್ಥಿತಿ: ಕೆರೆಯ ಆಸುಪಾಸಿನಲ್ಲಿರುವ ರಾಜಾ ಕೆಂಪೇಗೌಡ ಬಡಾವಣೆ, ಪೊಲೀಸ್ ಕ್ವಾರ್ಟ್ರಸ್, ಇಂದಿರಾ ಕಾಟೇಜ್, ಸಿ.ಎಂ.ಸಿ. ಬಡಾವಣೆ, ರಾಘವೇಂದ್ರ ಬಡಾವಣೆ ಹಾಗೂ ಶೆಟ್ಟಿಹಳ್ಳಿ ನಿವಾಸಿಗಳು ಮನೆಯಲ್ಲಿ ವಾಸ ಮಾಡಲಾಗದ ಸ್ಥಿತಿ ಅನುಭವಿಸುತ್ತಿದ್ದೇವೆ ಎಂದು ವಿವರಿಸುತ್ತಾರೆ.

ಇದರ ಪಕ್ಕದಲ್ಲಿ ಪಟ್ಟಣದ ಕೆಲವು ನಿವಾಸಿಗಳು ಕಸ ಸುರಿಯುತ್ತಾರೆ. ಯಾವುದೇ ಕಟ್ಟಡ ಒಡೆದರೂ ಅದರ ಮಣ್ಣು, ಸಿಮೆಂಟ್ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಾರೆ. ಇದು ದಿನನಿತ್ಯದ ಗೋಳು. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನ ಸೆಳೆದರೂ ಏನು ಪ್ರಯೋಜನವಾಗಿಲ್ಲ ಎಂದು ರಾಘವೇಂದ್ರ ಬಡಾವಣೆಯ ನಿವಾಸಿಗಳಾದ ಪ್ರದೀಪ್, ಸೋಮಶೇಖರ್, ಸುರೇಶ್ ಕುಮಾರ್ ತಿಳಿಸುತ್ತಾರೆ.

ನಗರಸಭೆಯೇ ಕಾರಣ: ಮಳೆಗಾಲದಲ್ಲಿ ನೀರು ತುಂಬಿಸಿಕೊಂಡು ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ನೀರುಣಿಸುತ್ತಿದ್ದ ಶೆಟ್ಟಿಹಳ್ಳಿ ಕೆರೆಗೆ ಈ ಸ್ಥಿತಿ ತಂದಿದ್ದು ಬೇರಾರೂ ಅಲ್ಲ ಅದು ನಗರಸಭೆ ಎಂದು ರಾಜಾ ಕೆಂಪೇಗೌಡ ಬಡಾವಣೆಯ ಸತ್ಯನಾರಾಯಣ, ವೆಂಕಟೇಶ್, ಜಗದೀಶ್ ಆರೋಪಿಸುತ್ತಾರೆ.

ಪಟ್ಟಣದ ಕೊಳಚೆ ನೀರನ್ನೆಲ್ಲ ಇಲ್ಲಿಗೆ ಹರಿಸಿದ ಪರಿಣಾಮವೇ ಇಂದು ಕೆರೆ ಗಬ್ಬೆದ್ದು ನಾರುತ್ತಿದೆ. ಒಳಚರಂಡಿ ನೀರು ಅಥವಾ ನಗರದ ಕೊಳಚೆ ನೀರನ್ನು ಶುದ್ದೀಕರಿಸಿ ನಂತರ ಆ ನೀರನ್ನು ಹರಿಸಬೇಕೆಂಬ ಸಾಮಾನ್ಯ ಜ್ಞಾನವೂ ಇವರಿಗೆ ಇಲ್ಲ. ಚರಂಡಿಯಲ್ಲಿ ಸಾಗಿ ಬಂದ ನೀರು ಸೀದಾ ಶೆಟ್ಟಿಹಳ್ಳಿ ಕೆರೆಯನ್ನು ಸೇರಿಕೊಳ್ಳುವಂತೆ ಮಾಡಿ ತನ್ನ ಕೆಲಸ ಮುಗಿಯಿತೆಂದು ನಗರಸಭೆ ಕೈ ತೊಳೆದುಕೊಂಡಿದೆ ಎಂದು ಅವರು ತಿಳಿಸುತ್ತಾರೆ.

ಒತ್ತುವರಿ ಭೂತ: ಸರ್ಕಾರಿ ಭೂಮಿಯನ್ನು ಕಾಡುವ ಒತ್ತುವರಿ ಭೂತ ಈ ಕೆರೆಯನ್ನೂ ಬಿಟ್ಟಿಲ್ಲ. ಸುಮಾರು 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಈ ಕೆರೆ ಇಂದು ಸುಮಾರು 15 ಎಕರೆ ಪ್ರದೇಶವನ್ನು ಕಳೆದುಕೊಂಡಿದೆ. ಸರ್ಕಾರಿ ಇಲಾಖೆಗಳೂ ಸೇರಿದಂತೆ ಇಂದಿರಾ ಕಾಟೇಜ್ ನ ಕೆಲವರು ಇದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇಂದಿಗೂ ಒತ್ತುವರಿ ನಡೆಯುತ್ತಲೇ ಇದೆ ಎಂದು ಇಲ್ಲಿಯ ಬಡಾವಣೆಯ ಬಹುತೇಕರು ಆರೋಪಿಸುತ್ತಾರೆ.

ಕೆರೆಯ ಮುಂಭಾಗದಲ್ಲಿರುವ ಕೆಇಬಿ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ರೇಷ್ಮೆ ಮಾರುಕಟ್ಟೆಗಳು ಒತ್ತುವರಿ ಮಾಡಿಕೊಂಡು ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿವೆ. ಇಂದಿರಾ ಕಾಟೇಜ್ ಬಳಿ ಕೆರೆಯ ತೀರದಲ್ಲಿರುವ ಕೆಲವರು ಕೆರೆ ಮುಚ್ಚಿ ಮನೆ ನಿರ್ಮಿಸಿಕೊಂಡಿದ್ದಾರೆ. ಹೆಚ್ಚಿನ ಒತ್ತುವರಿಯಾಗಿರುವುದು ಇಂದಿರಾ ಕಾಟೇಜ್ ಬಳಿ. ಒತ್ತುವರಿಯನ್ನು ನೋಡಿಯೂ ನೋಡದಂತೆ ಅಧಿಕಾರಿಗಳು ಇದ್ದಾರೆ ಎಂದು ಇಲ್ಲಿನ ನಿವಾಸಿಗಳಾದ ಪ್ರಭು, ಕುಮಾರ್, ರಾಘವೇಂದ್ರ, ಶೇಖರ್ ದೂರುತ್ತಾರೆ.

ಈಗ ಇದು ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದು, ಪ್ರಾಧಿಕಾರವು ಕೆರೆಯನ್ನು ಸ್ವಚ್ಚಗೊಳಿಸಲಿ. ಕೆರೆಗೆ ಹರಿದು ಬರುತ್ತಿರುವ ಒಳಚರಂಡಿ ನೀರನ್ನು ಬೇರೆಡೆಗೆ ಹರಿಸಲಿ. ಒತ್ತುವರಿಯಾಗಿರುವ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲಿ. ಈ ಕೆರೆಯ ಏರಿಯನ್ನು ಅಭಿವೃದ್ಧಿ ಮಾಡಿ ನಂತರ ಪಟ್ಟಣದ ವಾಸಿಗಳಿಗೆ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಡಲಿ ಎಂದು ಅವರು ಒತ್ತಾಯಿಸುತ್ತಾರೆ.

ಗುಬ್ಬುನಾತ ಬೀರುತ್ತಾ ಜನರ ನೆಮ್ಮದಿಗೆ ಸಂಚಕಾರ ತಂದಿರುವ ಶೆಟ್ಟಿಹಳ್ಳಿ ಕೆರೆಯನ್ನು ನಗರಸಭೆ ಅಥವಾ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಪುನಶ್ಚೇತನಗೊಳಿಸಲು ಮುಂದಾದರೆ ಕೆರೆಯ ಹಿಂದಿನ ವೈಭವ ಮರುಕಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ನಗರ ವಾಸಿಗಳ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.