ADVERTISEMENT

ಶಿವಕುಮಾರ ಶ್ರೀ ಹುಟ್ಟೂರು ಧಾರ್ಮಿಕ ಕೇಂದ್ರವಾಗಲಿ: ಸಿದ್ದಲಿಂಗ ಸ್ವಾಮೀಜಿ

ತುಮಕೂರು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಶಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:31 IST
Last Updated 24 ಡಿಸೆಂಬರ್ 2025, 6:31 IST
ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ವೀರಾಪುರದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿಗಳ 111 ಅಡಿ ಎತ್ತರದ ಪ್ರತಿಮೆ ಮಾದರಿ ವೀಕ್ಷಿಸಿದ ಸಿದ್ದಗಂಗಾ ಮಠ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಎಚ್.ಸಿ. ಬಾಲಕೃಷ್ಣ, ಕೆ ಆರ್ ಐ ಡಿ ಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಜತೆಯಲ್ಲಿದ್ದರು.
ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ವೀರಾಪುರದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿಗಳ 111 ಅಡಿ ಎತ್ತರದ ಪ್ರತಿಮೆ ಮಾದರಿ ವೀಕ್ಷಿಸಿದ ಸಿದ್ದಗಂಗಾ ಮಠ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಎಚ್.ಸಿ. ಬಾಲಕೃಷ್ಣ, ಕೆ ಆರ್ ಐ ಡಿ ಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಜತೆಯಲ್ಲಿದ್ದರು.   

ಕುದೂರು: ಸಿದ್ದಗಂಗಾ ಮಠದ  ಡಾ. ಶಿವಕುಮಾರ ಸ್ವಾಮೀಜಿ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರ ಇನ್ನೂ  ಕುಗ್ರಾಮವಾಗಿರುವುದು ಬೇಸರದ ಸಂಗತಿ. ಸರ್ಕಾರ ಕೂಡಲೇ ಈ ಗ್ರಾಮವನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮಕ್ಕೆ ಅನುಕೂಲತೆ ಮಾಡಿಕೊಡಬೇಕು ಎಂದು ತುಮಕೂರು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಲಹೆ ಮಾಡಿದರು.

ಕುದೂರು ಹೋಬಳಿಯ ವೀರಾಪುರದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೆ ₹25 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದೇ ಸಮಯದಲ್ಲಿ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರಾದ ಬಾನಂದೂರು ಅಭಿವೃದ್ಧಿಗೂ ಕೂಡ ₹25 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಎರಡೂ ಕಾಮಗಾರಿ ಒಂದೇ ಸಮಯಕ್ಕೆ ಮುಗಿಬೇಕಾಗಿತ್ತು. ಈ ಕಾಮಗಾರಿ ಮುಗಿದು ಐದು ವರ್ಷ ಆಗಬೇಕಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಸಿದ್ಧಗಂಗಾ ಶ್ರೀ ಪುತ್ಥಳಿ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದೆ ಎಂದರು.

ADVERTISEMENT

ವೀರಾಪುರ ಗ್ರಾಮ ಅಭಿವೃದ್ಧಿಯಾದರೆ ಮುಂದಿನ ದಿನಗಳಲ್ಲಿ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರ ಆಗುವುದರಲ್ಲಿ ಅನುಮಾನವಿಲ್ಲ. ಪ್ರತಿಮೆ ಸಣ್ಣಪುಟ್ಟ ಕೆಲಸ ಬಾಕಿಯಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿ. ಸರ್ಕಾರ ಆಸಕ್ತಿ ತೋರಿದಾಗ ಮಾತ್ರ ಇಂತಹ ಕಾಮಗಾರಿ  ಪೂರ್ಣ ಆಗಲು ಸಾಧ್ಯ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ವೇಳೆ ವೀರಾಪುರ ಹಾಗೂ  ಬಾನಂದೂರು ಗ್ರಾಮಗಳನ್ನು ಸರ್ಕಾರ ದತ್ತು ಪಡೆದಿತ್ತು ಎಂದು  ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಹೇಳಿದರು.

ವೀರಾಪುರಕ್ಕೆ ಸಂಪರ್ಕಿಸುವ ಅರಸನಕುಂಟಿ ಹಾಗೂ ಪಾಲನಹಳ್ಳಿ ರಸ್ತೆಗಳ ಅಭಿವೃದ್ಧಿ ಜತೆಗೆ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ತೆಗೆದುಕೊಂಡು ಅವರಿಗೆ ಬದಲಿ ಜಾಗ ನೀಡಲು ಕ್ರಮವಹಿಸಲಾಗುವುದು ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಭರವಸೆ ನೀಡಿದರು.

ಪ್ರತಿಮೆ ಕಾಮಗಾರಿ ಹಾಗೂ ಶ್ರೀಗಳ ಮನೆ ವೀಕ್ಷಣೆ ಬಳಿಕ ಸ್ವಾಮೀಜಿ ತಂದೆ, ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಯಶವಂತ್, ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಹೊನ್ನಾಪುರ ಶಿವಪ್ರಸಾದ್, ಪೊಲೀಸ್ ವಿಜಯಕುಮಾರ್, ಕಾಗಿಮಡು ದೀಪು, ತಟ್ಟಿಕೆರೆ ಬಾಬು, ಶ್ರೀಗಿರಿಪುರ ಪ್ರಕಾಶ್, ಪರಮಣ್ಣ, ಶಿವರುದ್ರಪ್ಪ ಭಾಗವಹಿಸಿದ್ದರು.

ವೀರಪುರದಲ್ಲಿ ನಿರ್ಮಾಣವಾಗುತ್ತಿರುವ ಸಿದ್ಧಗಂಗಾ ಸ್ವಾಮೀಜಿಗಳ ಪ್ರತಿಮೆ ಕಾಮಗಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.