ADVERTISEMENT

ಜನಪರ ವೇದಿಕೆ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 13:37 IST
Last Updated 17 ಮೇ 2019, 13:37 IST
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ‘ಕ್ಷೇತ್ರದ ಶಾಸಕರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಗಮನ ನೀಡುತ್ತಿಲ್ಲ’ ಎಂದು ಆರೋಪಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಪಟ್ಟಣದ ಕಾವೇರಿ ವೃತ್ತದಲ್ಲಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ತಾಲ್ಲೂಕಿನಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಹಕ್ಕೊತ್ತಾಯ ಮಾಡಿದರು.

‘ಹದಿನೈದು ವರ್ಷಗಳ ಹಿಂದೆ ಮಹದೇಶ್ವರ ದೇವಸ್ಥಾನವನ್ನು ಕೆಡವಿದ್ದು, ಅದನ್ನು ಪುನರ್ ನಿರ್ಮಿಸಬೇಕು. ಖಾಸಗಿ ಬಸ್ ನಿಲ್ದಾಣದ ಜಾಗದ ವಿವಾದಬಗೆಹರಿಸಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು. ಗಾಂಧಿ ಭವನಕ್ಕೆ ಅ. 2ರ ಒಳಗಾಗಿ ಕಾಯಕಲ್ಪ ನೀಡಬೇಕು. ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ಡಾ.ರಾಜ್ ಬಯಲು ರಂಗಮಂದಿರ ನಿರ್ಮಾಣ ಮಾಡಬೇಕು. ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ತೆರವುಗೊಳಿಸಿ, ಕೆರೆಯಲ್ಲಿ ಶುದ್ಧ ನೀರು ನಿಲ್ಲುವ ಹಾಗೆ ಮಾಡಬೇಕು. ದೋಣಿ ವಿಹಾರ ಕೇಂದ್ರ ಮತ್ತು ವಾಯುವಿಹಾರಿಗಳಿಗೆ ಫುಟ್‌ಪಾತ್‌ ನಿರ್ಮಾಣ ಮಾಡಬೇಕು’ ಎಂದರು.

ADVERTISEMENT

ನಗರದ ಯುಜಿಡಿ ಸಮಸ್ಯೆಗೆ ತಮ್ಮ ಅಧಿಕಾರದ ಅವಧಿಯಲ್ಲಿ ಮುಕ್ತಿ ನೀಡಬೇಕು. ರಾಮಮ್ಮನ ಕೆರೆಗೆ ನಗರದ ಆಸ್ಪತ್ರೆ ತ್ಯಾಜ್ಯ ಸೇರುತ್ತಿದ್ದು ಇದನ್ನು ತಪ್ಪಿಸಿ ಪ್ರವಾಸಿತಾಣ, ದೋಣಿ ವಿಹಾರ ಕೇಂದ್ರ, ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ತಾಲ್ಲೂಕಿನ ಮೋಳೆದೊಡ್ಡಿ, ಬಿ.ವಿ.ಹಳ್ಳಿ, ಅರಳಾಳುಸಂದ್ರ, ಕೋಡಂಬಳ್ಳಿ, ಶ್ಯಾನಭೋಗನಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಹಳ್ಳಿಗಳು ಕಾಡಾನೆಗಳ ದಾಳಿಗೆ ತುತ್ತಾಗುತ್ತಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಕೃಷಿ ಬೆಳೆ ನಷ್ಟವಾಗಿದ್ದು ಕೂಡಲೇ ಪರಿಹಾರ ಮತ್ತು ಆನೆಗಳ ದಾಳಿ ಮತ್ತೆ ಆಗದಂತೆ ಮುಂಜಾಗ್ರತೆ ವಹಿಸಬೇಕು.

‘ಕಸ ವಿಲೇವಾರಿಯಾಗದೆ ನಗರ ಬಹುತೇಕ ವಾರ್ಡುಗಳು ಗಬ್ಬುನಾರುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು. ಗುರುಭವನ, ಸುಸಜ್ಜಿತ ಪತ್ರಕರ್ತರ ಭವನ ಹಾಗೂ ಪತ್ರಕರ್ತರಿಗೆ ನಿವೇಶನ ನೀಡುವಂತೆ ಕ್ರಮ ವಹಿಸಬೇಕು. ಪಟ್ಟಣದ ರೈಲ್ವೆ ಮೇಲುಸೇತುವೆ ನಿರ್ಮಾಣ, ಕಣ್ವ ಜಲಾಶಯ ತುಂಬಿಸಬೇಕು. ಕೆಎಸ್ಐಸಿ ಮಿಲ್ ಅನ್ನು ಮತ್ತಷ್ಟು ವಿಸ್ತರಿಸಿ ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ಎಲ್ಲ ಕೆರೆಗಳ ರಸ್ತೆಗಳಿಗೆ ತಡೆಗೋಡೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ.ಉಮಾಶಂಕರ್, ಯುವ ಘಟಕದ ಉಪಾಧ್ಯಕ್ಷ ರಂಜಿತ್ ಗೌಡ, ಪದಾಧಿಕಾರಿಗಳಾದ ಚೇತನ್ಕೀಕರ್, ಕೃಷ್ಣಪ್ರಸಾದ್, ಮರಿಅಂಕೇಗೌಡ, ಕೋಡಂಬಳ್ಳಿ ನಾಗರಾಜು, ತಿಪ್ಪೂರು ರಾಜೇಶ್, ಯೇಸು, ಕುಮಾರ್, ಶ್ಯಾಮ್, ಎಲ್.ಐ.ಸಿ. ಕೃಷ್ಣಪ್ಪ, ಅರಳಾಪುರ ಚೇತನ್, ಮಹೇಶ್, ಮಹಿಳಾ ಘಟಕದ ರಾಜಮ್ಮ, ಮಂಗಳಮ್ಮ, ರೋಸಿ, ನಿರ್ಮಲಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.