ADVERTISEMENT

ರೇಷ್ಮೆ ಗೂಡು ಕಳ್ಳತನ ತಡೆಯಲು ಸೂಚನೆ

ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಗೆ ಸಚಿವ ಸಾ.ರಾ.ಮಹೇಶ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 13:37 IST
Last Updated 30 ಜೂನ್ 2018, 13:37 IST
ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಚಿವ ಸಾ.ರಾ. ಮಹೇಶ್‌ ಶನಿವಾರ ಭೇಟಿ ನೀಡಿದ್ದರು
ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಚಿವ ಸಾ.ರಾ. ಮಹೇಶ್‌ ಶನಿವಾರ ಭೇಟಿ ನೀಡಿದ್ದರು   

ರಾಮನಗರ : ಇಲ್ಲಿನ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ರೇಷ್ಮೆ ಸಚಿವ ಸಾ.ರಾ. ಮಹೇಶ್ ದಿಢೀರ್‌ ಭೇಟಿ ನೀಡಿ, ನೂಲು ಬಿಚ್ಚಾಣಿಕೆದಾರರ ಹಾಗೂ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದರು.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಮಯದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಭೇಟಿ ನೀಡಿದ ಸಚಿವ ಸಾ.ರಾ. ಮಹೇಶ್‌ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಕಾಪಾಡದಿರುವುದನ್ನು ಕಂಡು ಅಧಿಕಾರಿಗಳ ಕ್ರಮವನ್ನು ಆಕ್ಷೇಪಿಸಿದರು. ಇ–ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಿದ ಸಚಿವರಿಗೆ, ರೇಷ್ಮೆ ಬೆಳೆಗಾರರು ಕೌಂಟರ್‌ನಲ್ಲಿ ರೇಷ್ಮೆ ಗೂಡಿಗೆ ₹100 ರಿಂದ ₹200 ಕಡಿತಗೊಳಿಸಿ ಹಣ ಪಾವತಿಸಲಾಗುತ್ತಿದೆ. ಗೂಡು ಕಳ್ಳತನಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಗೂಡು ಕಳ್ಳತನ ಹೆಚ್ಚಾಗಿರುವುದರಿಂದ ರೈತರು ಮಾರುಕಟ್ಟೆಗೆ ಗೂಡು ತರಲು ಹಿಂದೆ ಮುಂದೆ ನೋಡುತ್ತಿದ್ದು, ಬೇರೆ ಮಾರುಕಟ್ಟೆಗೆ ತೆರಳುತ್ತಿದ್ದಾರೆ. ಜತೆಗೆ ಮಾರುಕಟ್ಟೆ ಹೊರ ಭಾಗದಲ್ಲಿ ಗೂಡು ಮಾರಾಟವಾಗುತ್ತಿದೆ. ಪ್ರತಿ ನಿತ್ಯ ಗೂಡಿನ ಕಳ್ಳತನವಾಗುತ್ತಿದ್ದರೂ ಮಾರುಕಟ್ಟೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ADVERTISEMENT

ಸಚಿವ ಸಾ.ರಾ.ಮಹೇಶ್ ಇದಕ್ಕೆ ವಿವರಣೆ ಕೇಳಿದಾಗ ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಮುನ್ಶಿಬಸಯ್ಯ, ‘ಕ್ಯಾಶ್ ಕೌಂಟರ್ ನಲ್ಲಿ ರೈತರಿಂದ ₹100 ರಿಂದ ₹200 ಕಡಿತಗೊಳಿಸಿ ನೀಡುತ್ತಿದ್ದ ರಾಕೇಶ್ ಎಂಬುವರನ್ನು ಸೇವೆಯಿಂದ ವಜಾ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮಾರುಕಟ್ಟೆಯಲ್ಲಿ ಅಳವಡಿಸಿರುವ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧರಿಸಿ ಗೂಡು ಕಳ್ಳತನ ಮಾಡುತ್ತಿದ್ದವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಈವರೆಗೆ ಪೊಲೀಸ್‌ ಠಾಣೆಯಲ್ಲಿ ಮೂರು ಎಫ್ಐಆರ್‌ಗಳು ದಾಖಲಾಗಿವೆ ಎಂದರು.

‘ನೈಜ ನೂಲು ಬಿಚ್ಚಾಣಿಕೆದಾರರಿಗೆ ಸಮರ್ಪಕವಾಗಿ ಗೂಡು ದೊರೆಯುತ್ತಿಲ್ಲ. ಕಳ್ಳಕಾಕರ ಬಳಿ ಗೂಡಿಗಾಗಿ ಬೇಡಿಕೊಳ್ಳಬೇಕಾಗುತ್ತಿದೆ. ಹೊರ ಭಾಗದಲ್ಲಿ ಗೂಡು ಮಾರಾಟ ವಾಗುತ್ತಿರುವುದರಿಂದ ಮಾರುಕಟ್ಟೆಗೆ ಆರ್ಥಿಕ ನಷ್ಟವೂ ಆಗಲಿದೆ. ಇದಕ್ಕೆ ಸಿಬ್ಬಂದಿಯ ಕುಮ್ಮಕ್ಕು ಇದೆ. ಇದು ಹೀಗೆ ಮುಂದುವರೆದರೆ ಮಾರುಕಟ್ಟೆ ಮುಚ್ಚಿಹೋಗುವ ಪರಿಸ್ಥಿತಿ ಎದುರಾಗಲಿದೆ’ ಎಂದು ನೂಲು ಬಿಚ್ಚಾಣಿಕೆದಾರರು ಆತಂಕ ವ್ಯಕ್ತಪಡಿಸಿದರು.

ಮಾರುಕಟ್ಟೆಯಲ್ಲಿನ ಸಿ.ಸಿ. ಟಿವಿ ಕ್ಯಾಮೆರಾಗಳು ಕೆಟ್ಟಿವೆ. ಪ್ರತಿನಿತ್ಯ 800 ಕೆಜಿಯಿಂದ ಒಂದು ಸಾವಿರಕ್ಕೂ ಹೆಚ್ಚು ಕೆ.ಜಿ ಗೂಡು ಕಳ್ಳತನವಾಗುತ್ತಿದೆ. ಒಬ್ಬೊಬ್ಬ ಮಧ್ಯವರ್ತಿಗಳು ಐದೈದು ಕಳ್ಳರನ್ನು ಸಾಕುತ್ತಿದ್ದಾರೆ. ಇದರಿಂದ ಅವರ ಸಂಪಾದನೆ ಅಧಿಕಾರಿಗಳ ವೇತನಕ್ಕೂ ಹೆಚ್ಚಿದೆ ಎಂದು ತಿಳಿಸಿದರು.

ರೇಷ್ಮೆ ಗೂಡಿನ ಹಣ ಪಾವತಿಯಲ್ಲಿ ವಿಳಂಬ ಜತೆಗೆ ಮೋಸ ಮಾಡಲಾಗುತ್ತಿದೆ. ಅಲ್ಲದೆ, ರೇಷ್ಮೆ ಗೂಡು ವಹಿವಾಟು ನಡೆಸಲು ಸ್ಥಳಾವಕಾಶದ ಕೊರತೆಯಿದೆ ಎಂದು ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಸಚಿವರ ಗಮನ ಸೆಳೆದರು.
ಬೆಳೆಗಾರರಿಗೆ ಹಣ ಪಾವತಿಸುವುದನ್ನು ಆನ್ ಲೈನ್ ವ್ಯವಸ್ಥೆಗೆ ತರಲು ಪ್ರಸ್ತಾವನೆ ಸಲ್ಲಿಸಲಾಗಿದೆ. ನೂಲು ಬಿಚ್ಚಾಣಿಕೆದಾರರು ಹಣವನ್ನು ಮಾರುಕಟ್ಟೆ ಖಾತೆಗೆ ಜಮಾ ಮಾಡಿದರೆ ಅಲ್ಲಿಂದ ರೈತರಿಗೆ ಆರ್ ಟಿಜಿಎಸ್ ಮೂಲಕ ಪಾವತಿಸಲು ಅನುಕೂಲವಾಗುತ್ತದೆ ಎಂದರು.

ಈಗ ಮಾರುಕಟ್ಟೆಯಲ್ಲಿ 20 ರಿಂದ 25 ಟನ್ ರೇಷ್ಮೆ ಗೂಡು ವಹಿವಾಟು ನಡೆಸುವಷ್ಟು ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಆದರೂ ಪ್ರತಿನಿತ್ಯ 45 ರಿಂದ 50 ಟನ್ ವಹಿವಾಟು ನಡೆಯುತ್ತಿದೆ. 10 ರಿಂದ 15 ಎಕರೆ ಜಮೀನಿನಲ್ಲಿ ಆಧುನಿಕ ಮಾರುಕಟ್ಟೆ ನಿರ್ಮಾಣವಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಮುನ್ಶಿಬಸಯ್ಯ ತಿಳಿಸಿದರು.

ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಅಹವಾಲು ಆಲಿಸಿದ ಸಚಿವರು ರೇಷ್ಮೆ ಇಲಾಖೆ ಹಾಗೂ ಮಾರುಕಟ್ಟೆ ಅಧಿಕಾರಿಗಳೊಡನೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ನಗರಸಭಾ ಸದಸ್ಯ ಪರ್ವೀಜ್‌ ಪಾಷಾ, ಎ. ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.