ADVERTISEMENT

ಕನಕಪುರ: ಸಾಮಾಜಿಕ ಪರಿಶೋಧನಾ ಸಭೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 3:11 IST
Last Updated 26 ಜನವರಿ 2026, 3:11 IST
ಕನಕಪುರ ತಾಲ್ಲೂಕಿನ ಬಸವನ ಬನ್ನಿಕುಪ್ಪೆ ಗ್ರಾಮದಲ್ಲಿ ತುಂಗಣಿ ಗ್ರಾಮ ಪಂಚಾಯಿತಿಯ ಸಾಮಾಜಿಕ ಪರಿಶೋಧನಾ ಸಭೆ ನಡೆಯಿತು
ಕನಕಪುರ ತಾಲ್ಲೂಕಿನ ಬಸವನ ಬನ್ನಿಕುಪ್ಪೆ ಗ್ರಾಮದಲ್ಲಿ ತುಂಗಣಿ ಗ್ರಾಮ ಪಂಚಾಯಿತಿಯ ಸಾಮಾಜಿಕ ಪರಿಶೋಧನಾ ಸಭೆ ನಡೆಯಿತು   

ಕನಕಪುರ: ತಾಲ್ಲೂಕಿನ ತುಂಗಣಿ ಗ್ರಾಮ ಪಂಚಾಯಿತಿಯ ಸಾಮಾಜಿಕ ಪರಿಶೋಧನಾ ಸಭೆಯು ತಾಲ್ಲೂಕಿನ ಕಸಬಾ ಹೋಬಳಿ ಬಸವನ ಬನ್ನಿಕುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ನಾರಾಯಣ್ ನೋಡಲ್ ಅಧಿಕಾರಿಯಾಗಿ ಪಂಚಾಯಿತಿಯ 2024-25ನೇ ಸಾಲಿನ ಸಾಮಾಜಿಕ ಪರಿಶೋಧನಾ ಸಭೆ ನಡೆಸಿಕೊಟ್ಟರು.

ಜಿಲ್ಲಾ ಸಂಯೋಜಕ ಶ್ರೀನಿವಾಸಮೂರ್ತಿ ಕೆ.ಜಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಪಂಚಾಯಿತಿಯಲ್ಲಿ 2024-25 ನೇ ಸಾಲಿನಲ್ಲಿ ಒಟ್ಟಾರೆ 386 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಕೂಲಿ ವೆಚ್ಚ ₹1.18 ಕೋಟಿ ಮತ್ತು ಸಾಮಗ್ರಿ ವೆಚ್ಚ ₹1.05 ಕೋಟಿ ಸೇರಿದಂತೆ ಒಟ್ಟು ₹2.23 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪಂಚಾಯಿತಿಯಲ್ಲಿ ಕೈಗೊಂಡಿರುವ ಕೆಲವು ಕಾಮಗಾರಿಗಳಲ್ಲಿ 1, 2, 3ನೇ ಹಂತದ ಫೋಟೋ ಇಲ್ಲ. ಒಂಬತ್ತು  ದನದ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿ ಹಣ ಬಿಡುಗಡೆಯಾದ ನಂತರ ಒಡೆದು ಹಾಕಿದ್ದಾರೆ. ಕೆಲ ಬಚ್ಚಲ ಗುಂಡಿ ಕಾಮಗಾರಿಗಳ ಸ್ವರೂಪ ಬದಲಾಗಿದೆ. 21 ದನ ಮತ್ತು ಕುರಿ ಕೊಟ್ಟಿಗೆಗಳನ್ನು ಉಪಯೋಗಿಸುತ್ತಿಲ್ಲ. ಕಾಮಗಾರಿಗಳಲ್ಲಿ ಲೋಪದೋಷ ಸರಿಪಡಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಹಣ ವಾಪಸ್ ಕಟ್ಟಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಪಿಡಿಒ ಮುನಿಯಪ್ಪ ಮಾತನಾಡಿ, ಕಾಮಗಾರಿಗಳಲ್ಲಿ ಆಗಿರುವ ಲೋಪದೋಷಗಳನ್ನು 15 ದಿನದಲ್ಲಿ ಸರಿಪಡಿಸಲಾಗುವುದು. ಒಂದು ವೇಳೆ ಮರು ನಿರ್ಮಾಣ ಮಾಡದಿದ್ದರೆ ಅಂತಹ ಕಾಮಗಾರಿಗಳ ಹಣವನ್ನು ಮರುಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಪಂಚಾಯಿತಿ ಅಧ್ಯಕ್ಷೆ ರಮ್ಯ ಸತೀಶ್, ಉಪಾಧ್ಯಕ್ಷೆ ಶೋಭಾ ಕುಮಾರ್, ಸದಸ್ಯರು, ನೌಕರರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.