ರಾಮನಗರ: ಭೂ ಕಂಪನದ ಅನುಭವವಾದ ತಾಲ್ಲೂಕಿನ ಬೆಜ್ಜರಹಳ್ಳಿಕಟ್ಟೆ ಗ್ರಾಮಕ್ಕೆ ಭಾನುವಾರ ತಹಶೀಲ್ದಾರ್ ವಿಜಯಕುಮಾರ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು.
ಬೆಜ್ಜರಹಳ್ಳಿಕಟ್ಟೆ ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಗ್ರಾಮಸ್ಥರು ತಮಗಾದ ಅನುಭವಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಶನಿವಾರ ಮೊದಲಿಗೆ 5.30ರ ಸಮಯದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ನಂತರ ಯಾರೋ ಖಾಸಗಿ ಲೇಔಟ್ ನಿರ್ಮಾಣ ಮಾಡುವವರು ಬಂಡೆಯನ್ನು ಸ್ಫೋಟಿಸಿದ್ದರಿಂದ ಭಾರಿ ಶಬ್ದ ಉಂಟಾಗಿದೆ ಎಂಬ ಮಾತುಗಳು ಕೇಳಿಬಂದವು.
ನಂತರ ಮಧ್ಯಾಹ್ನ 3 ಗಂಟೆಗೊಮ್ಮೆ, ರಾತ್ರಿವರೆಗೂ ಆಗಾಗ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವಗಳಾಗಿವೆ. ಇದರಿಂದ ಗಾಬರಿಗೊಂಡು ಮನೆಯಿಂದ ಹೊರಗೆ ಬಂದು ಕಂಪನದ ಅನುಭವಗಳ ಬಗ್ಗೆ ಖಾತರಿ ಮಾಡಿಕೊಳ್ಳುತ್ತಿದ್ದೆವು. ರಾತ್ರಿಯಿಡೀ ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿತ್ತು. ಭೂಮಿ ಕಂಪಿಸಿದ ಬಗ್ಗೆ ಸುತ್ತಮುತ್ತಲ ಗ್ರಾಮದವರು, ದೂರದ ಊರುಗಳಿಂದಲೂ ದೂರವಾಣಿ ಕರೆ ಮಾಡಿ ವಿಚಾರ ತಿಳಿದುಕೊಂಡರು ಎಂದು ಗ್ರಾಮಸ್ಥರು ವಿವರಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಲೋಕೇಶ್ ಮಾತನಾಡಿ, ‘ಇತ್ತೀಚೆಗೆ ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಟ್ಟ ಗುಡ್ಡಗಳ ತಳಭಾಗದಲ್ಲಿರುವ ನೀರಿನ ಸೆಲೆಗಳು ಹರಿದು ಒಂದಕ್ಕೊಂದು ಡಿಕ್ಕಿ ಹೊಡೆಯುವುದರಿಂದ ಭೂಮಿಯೊಳಗೆ ಶಬ್ದ ಬಂದಿರಬಹುದು’ ಎಂದರು.
ಅಲ್ಲದೆ ಹಿಂದೆ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ 1,000– 1,500 ಅಡಿವರೆಗೆ ಕೊರೆದರೂ ನೀರು ಸಿಗದ ಕೊಳವೆ ಬಾವಿಗಳಲ್ಲಿ ಈಗ ಜಲ ಮರುಪೂರಣವಾಗಿದೆ. ಅಂತರ್ಜಲ ವೃದ್ಧಿಯಾಗಿರುವುದರಿಂದ ಒಳಗಿದ್ದ ಗಾಳಿ ಹೊರಗೆ ಸ್ಫೋಟಗೊಂಡು ಶಬ್ದ ಉಂಟಾಗುವಸಾಧ್ಯತೆಗಳಿವೆ. ಭೂಮಿ ಕಂಪನ ಆಗಿರುವ ಬಗ್ಗೆ ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ. ಹೀಗಾಗಿ ಯಾರೂ ಭಯ ಪಡುವ ಅಗತ್ಯವಿಲ್ಲ, ಊಹಾಪೋಹಗಳಿಗೆ ಕಿವಿಗೊಡಬೇಕಾಗಿಲ್ಲ ಎಂದು ಸಮಾಧಾನ ಹೇಳಿದರು.
ಗ್ರಾ.ಪಂ. ಸದಸ್ಯ ರಾಮ ಮೋಹನ್, ಮುಖಂಡ ಮಂಚೇಗೌಡ, ಕಸಬಾ ಹೋಬಳಿ ರಾಜಸ್ವನಿರೀಕ್ಷಕ ನಾಗರಾಜು ಮತ್ತಿತರರು ಜೊತೆಗಿದ್ದರು.
ಮುಖ್ಯಾಂಶಗಳು
* ಮೊದಲಿಗೆ ಶನಿವಾರ 5.30 ವೇಳೆಗೆ 3 ಬಾರಿ ಭೂಮಿ ಕಂಪಸಿದ ಅನುಭವ
* ಖಾಸಗಿ ಲೇಔಟ್‌ನಲ್ಲಿ ಬಂಡೆ ಸ್ಫೋಟಿಸಿದ್ದರಿಂದ ಈ ಸದ್ದು ಎಂಬ ಮಾತು
* ಊಹಾಪೋಹಗಳಿಗೆ ಕಿವಿಗೊಡದಂತೆ ಗ್ರಾಮಸ್ಥರಿಗೆ ಅಧಿಕಾರಿಗಳ ಕಿವಿಮಾತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.