ADVERTISEMENT

ಕುದೂರು | ಕಡೇ ಶ್ರಾವಣ ಶನಿವಾರ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 15:54 IST
Last Updated 31 ಆಗಸ್ಟ್ 2024, 15:54 IST
ಕುದೂರು ಹೋಬಳಿ ಬಿಸ್ಕೂರು ಗ್ರಾಮದ ಶ್ರೀರಂಗನಾಥ ಸ್ವಾಮಿಗೆ ಕಡೇ ಶ್ರಾವಣ ಶನಿವಾರದ ಅಂಗವಾಗಿ ಬೆಳ್ಳಿ ವಜ್ರಾಂಗಿ ಹಾಕಿ ವೆಂಕಟೇಶ್ವರ ಅಲಂಕಾರ ಮಾಡಲಾಗಿತ್ತು.
ಕುದೂರು ಹೋಬಳಿ ಬಿಸ್ಕೂರು ಗ್ರಾಮದ ಶ್ರೀರಂಗನಾಥ ಸ್ವಾಮಿಗೆ ಕಡೇ ಶ್ರಾವಣ ಶನಿವಾರದ ಅಂಗವಾಗಿ ಬೆಳ್ಳಿ ವಜ್ರಾಂಗಿ ಹಾಕಿ ವೆಂಕಟೇಶ್ವರ ಅಲಂಕಾರ ಮಾಡಲಾಗಿತ್ತು.   

ಕುದೂರು: ಕಡೇ ಶ್ರಾವಣ ಶನಿವಾರದ ಪ್ರಯುಕ್ತ ಹೋಬಳಿಯ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಿತು.

ಪಟ್ಟಣದ ಶ್ರೀರಾಮಲಿಂಗ ಚೌಡೇಶ್ವರಿ, ಲಕ್ಷ್ಮೀದೇವಿ (ಕುದೂರಮ್ಮ), ಲಕ್ಷ್ಮೀನರಸಿಂಹ ಸ್ವಾಮಿ, ಪೇಟೆ ಆಂಜನೇಯ ಸ್ವಾಮಿ, ಕಾಳಿಕಾಂಬ, ಕೊಲ್ಲಾಪುರದಮ್ಮ, ಕನ್ನಿಕಾ ಪರಮೇಶ್ವರಿ ದೇವಾಲಯ ಸೇರಿದಂತೆ ಹೋಬಳಿಯ ಇತಿಹಾಸ ಪ್ರಸಿದ್ಧ ಸುಗ್ಗನಹಳ್ಳಿಯ ಶ್ರೀಲಕ್ಷ್ಮೀ ನರಸಿಂಹಸ್ವಾಮಿ, ಬೆಟ್ಟಹಳ್ಳಿ ಗುಡ್ಡದ ರಂಗನಾಥ ಸ್ವಾಮಿ ದೇವಾಲಯಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ಬೆಳಗ್ಗಿನಿಂದಲೇ ಭಕ್ತರು ದೇವಾಲಯಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ, ಅನ್ನ ಸಂತರ್ಪಣೆ ಮಾಡಲಾಗಿತ್ತು.

ADVERTISEMENT

ಮನೆ ಮನೆ ಭಿಕ್ಷಾಟನೆ: ವೆಂಕಟರಮಣ ಸ್ವಾಮಿ ದೇವರನ್ನು ಪೂಜಿಸುವವರು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ವಾರ ಮನೆಯಲ್ಲಿ ಹಬ್ಬ ಆಚರಣೆ ಮಾಡುವುದು ರೂಡಿ. ಈ ದಿನ ಮನೆಯ ಹಿರಿಯರು, ಕಿರಿಯರು ಹಣೆಯ ಮೇಲೆ ಮೂರು ನಾಮ ಹಾಕಿಕೊಂಡು ಮೂರು ಮನೆಗೆ ಹೋಗಿ ಭಿಕ್ಷಾಟನೆ ಮಾಡಿಕೊಂಡು ಬಂದು, ಭಿಕ್ಷೆಯಿಂದ ಸಿಕ್ಕಿದ ದವಸ ಧಾನ್ಯವನ್ನು ಮನೆಯಲ್ಲಿಟ್ಟು ಪೂಜಿಸುತ್ತಾರೆ. ದೇವಾಲಯದ ಅರ್ಚಕರಿಗೆ ಒಪ್ಪಿಸುವ ಸಾಂಪ್ರದಾಯವೂ ಕೂಡ ರೂಢಿಯಲ್ಲಿದೆ. ಕೆಲವರು ಮನೆ ಮನೆಗೆ ತೆರಳಿ ಗೋವಿಂದನ ನಾಮಸ್ಮರಣೆ ಮಾಡಿ ಭಿಕ್ಷಾಟನೆ ಮಾಡಿದರು.

ವಜ್ರಾಂಗಿ ಅಲಂಕಾರ: ಬಿಸ್ಕೂರಿನ ಶ್ರೀರಂಗನಾಥ ಸ್ವಾಮಿಗೆ ಬೆಳ್ಳಿ ವಜ್ರಾಂಗಿ ಹಾಕಿ ವೆಂಕಟೇಶ್ವರನ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಗ್ರಾಮದ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.