ADVERTISEMENT

ಕಾಂಗ್ರೆಸ್, ಜೆಡಿಎಸ್ ಸದಸ್ಯರ ವಾಕ್ಸಮರ

ಅಳ್ಳಿಮಾರನಹಳ್ಳಿ ಗ್ರಾ. ಪಂ ಕಚೇರಿಯಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 5:07 IST
Last Updated 14 ಫೆಬ್ರುವರಿ 2023, 5:07 IST
ಕನಕಪುರದ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ಮಾತಿನ ಜಕಮಕಿ ನಡೆಯಿತು
ಕನಕಪುರದ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ಮಾತಿನ ಜಕಮಕಿ ನಡೆಯಿತು   

ಕನಕಪುರ: ಗ್ರಾಮದ ಅಭಿವೃದ್ಧಿ ಮತ್ತು ನರೇಗಾ ಯೋಜನೆ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಮತ್ತು ಸದಸ್ಯರ ವಾದ ಮತ್ತು ಪ್ರತಿವಾದಗಳಿಗೆ ಸೋಮವಾರ ಅಳ್ಳಿಮಾರನಹಳ್ಳಿ ಗ್ರಾ. ಪಂ ಕಚೇರಿ ವೇದಿಕೆಯಾಯಿತು.

ಗ್ರಾಮದ ಅಭಿವೃದ್ಧಿ ಮತ್ತು ನರೇಗಾ ಯೋಜನೆಯಡಿ ತಮಗೆ ಸರಿಯಾಗಿ ಕೆಲಸ ಕೊಡುತ್ತಿಲ್ಲ ಎಂದು ಜೆಡಿಎಸ್ ಬೆಂಬಲಿತ ಪಂಚಾಯಿತಿ ಸದಸ್ಯೆ ಎಲ್ಲಮ್ಮ ಚಿಕ್ಕಸ್ವಾಮಿ ಸೋಮವಾರ ಜೆಡಿಎಸ್‌ ಮುಖಂಡರ ಜತೆಗೂಡಿ ಅಳ್ಳಿಮರನಹಳ್ಳಿ ಗ್ರಾ. ಪಂ ಎದುರು ಪ್ರತಿಭಟನೆ ನಡೆಸಿದರು.

‘ನಮಗೆ ಆಶ್ರಯ ಮನೆಗಳನ್ನು ನೀಡುತ್ತಿಲ್ಲ. ಆದರ್ಶ ಗ್ರಾಮದ ಯೋಜನೆಯಡಿ ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಪಂಚಾಯಿತಿಯಲ್ಲಿ ಎಲ್ಲ ಪಕ್ಷದ ಸದಸ್ಯರಿಗೆ ಸಮಾನವಾದ ಅವಕಾಶ ಮತ್ತು ಎಲ್ಲ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಆಗಬೇಕು. ಆದರೆ, ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ’ ಎಂದು ಎಲ್ಲಮ್ಮ ಚಿಕ್ಕಸ್ವಾಮಿ ಆರೋಪಿಸಿದರು. ಜತೆಗೆ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡರು, ಪಂಚಾಯಿತಿಯಲ್ಲಿ ಎಲ್ಲ ಕೆಲಸಗಳು ಕಾನೂನು ವ್ಯಾಪ್ತಿಯಲ್ಲಿ ಇಲಾಖೆ ನಿಯಮಾನುಸಾರ ನಡೆಯುತ್ತಿವೆ. ನೀವು ಸುಖಾಸುಮ್ಮನೆ ಗದ್ದಲ ಎಬ್ಬಿಸಿ, ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಜೆಡಿಎಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಸಮಯ ಎರಡೂ ಪಕ್ಷದವರ ಮಧ್ಯೆ ಮಾತಿನ ಚಕಮಕಿ ನಡೆದು, ನಂತರ ಎರಡೂ ಕಡೆಯವರು ಪಂಚಾಯಿತಿಯಿಂದ ಹೊರನಡೆದರು.

ಪಂಚಾಯಿತಿಯಲ್ಲಿ ಗಲಾಟೆ ಆಗಿರುವ ಹಿನ್ನೆಲೆಯಲ್ಲಿ ಇಒ ಭೈರಪ್ಪ ಗ್ರಾ. ಪಂ ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿ ಏನು ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗ್ರಾ. ಪಂ ಅಧ್ಯಕ್ಷೆ ಸಂಧ್ಯಾ ರಾಣಿ, ಪಿಡಿಒ ಹನುಮಪ್ಪ ರೇಣಿ ಪಂಚಾಯಿತಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಆದರೂ ವಾಡೇದೊಡ್ಡಿ ಸದಸ್ಯರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.