ADVERTISEMENT

ಬೀದಿ ನಾಯಿಗಳ ಹಾವಳಿ: ಬಾಲಕಿಯ ಕೈ ಮುರಿತ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 12:55 IST
Last Updated 16 ಡಿಸೆಂಬರ್ 2019, 12:55 IST
ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಪ್ರೀತಿ
ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಪ್ರೀತಿ   

ರಾಮನಗರ: ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಕಿ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಐಜೂರು ವಾಟರ್ ಟ್ಯಾಂಕ್ ಬಳಿ ನಡೆದಿದೆ.

ಗಿರೀಶ್ ಎಂಬುವರ ಪುತ್ರಿ ಆರ್‌.ಜಿ. ಪ್ರೀತಿ (11) ಗಾಯಗೊಂಡಿದ್ದು ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಭಾನುವಾರ ಬೆಳಿಗ್ಗೆ ಹಾಲು ತರಲು ಪ್ರೀತಿ ಅಂಗಡಿಗೆ ತೆರಳುತ್ತಿದ್ದ ವೇಳೆ ಬೀದಿ ನಾಯಿಗಳ ಹಿಂಡು ಆಕೆಯನ್ನು ಹಿಂಬಾಲಿಸಿವೆ. ಇದರಿಂದ ಭಯಗೊಂಡ ಪ್ರೀತಿ ಓಡಲು ಆರಂಭಿಸಿದ್ದಾಳೆ. ತಕ್ಷಣ ಆಯ ತಪ್ಪಿ ಕೆಳಗೆ ಬಿದ್ದ ಕಾರಣ ಕೈಗೆ ತೀವ್ರವಾಗಿ ಪೆಟ್ಟು ಬಿದ್ದಿದೆ.

ಅಲ್ಲಿದ್ದ ಸಾರ್ವಜನಿಕರು ಬಾಲಕಿಯ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಪೊಷಕರು ಬಾಲಕಿಯನ್ನು ಹತ್ತಿರದ ನಾರಾಯಣ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಬಾಲಕಿಯ ಕೈ ಮೂಳೆ ಮುರಿದಿದೆ. ಪ್ರೀತಿ ಕುಟುಂಬದವರು ದಿನಗೂಲಿ ನೌಕರರಾಗಿದ್ದು, ಚಿಕಿತ್ಸೆ ಹಣಕ್ಕೆ ಪರದಾಡುತ್ತಿದ್ದಾರೆ.

ADVERTISEMENT

ಜನರ ಆಕ್ರೋಶ: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ನಗರಸಭೆಯವರು ಯಾವುದೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಹಿಂಡು ಹಿಂಡಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುವುದರ ಜತೆಗೆ ಶಾಲಾ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ನಗರದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಮಾಂಸ ಮಾರಾಟದ ಅಂಗಡಿಗಳಿಂದಾಗಿ ನಾಯಿಗಳ ಸಂತತಿ ಹೆಚ್ಚಾಗುತ್ತಿದೆ. ಮಾಂಸದ ಅಂಗಡಿಗಳ ಬಳಿಯಲ್ಲಿ ಬಿಸಾಡುವ ತ್ಯಾಜ್ಯಗಳನ್ನು ತಿನ್ನಲು ಬೀಡುಬಿಟ್ಟಿರುವ ಅವು, ರಸ್ತೆಗಳ ಎರಡೂ ಬದಿಯಲ್ಲಿ ಮಲಗುತ್ತವೆ. ಪಕ್ಕದಲ್ಲಿ ಹೋಗುವವರ ಮೇಲೆ ಪಕ್ಕನೆ ಎರಗುತ್ತವೆ, ಒಂದು ನಾಯಿ ಹಿಂದಟ್ಟಿದರೆ ಅದರ ಹಿಂದೆ ಹತ್ತಾರು ನಾಯಿಗಳು ಏಕಕಾಲದಲ್ಲಿ ದಾಳಿ ಮಾಡುತ್ತವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.