ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬುಧವಾರ ‘ಗೇಟ್ ಕೀಪರ್ ತರಬೇತಿ ನಡೆಯಿತು.
ರಾಮನಗರ: ‘ಆತ್ಮಹತ್ಯೆಯು ಜಾಗತಿಕವಾದ ಗಂಭೀರ ಸಮಸ್ಯೆಯಾಗಿದೆ. ಭಾರತದಲ್ಲಿ 2022ರ ವರದಿ ಪ್ರಕಾರ 30ರಿಂದ 40ರ ಮಧ್ಯ ವಯಸ್ಸಿನ ಪುರುಷರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಮನೋವೈದ್ಯಕೀಯ ಸಾಮಾಜಿಕ ಕಾರ್ಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ. ಅನೀಶ್ ವಿ. ಚೆರಿಯನ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುರಕ್ಷಾ ಯೋಜನೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ, ‘ಗೇಟ್-ಕೀಪರ್ ತರಬೇತಿ: ಆತ್ಮಹತ್ಯೆ ತಡೆಗಟ್ಟುವುದರಲ್ಲಿ ಇವರ ಪಾತ್ರ, ಕರ್ತವ್ಯ, ಜವಾಬ್ದಾರಿ’ ಕುರಿತು ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸುರಕ್ಷಾ ಯೋಜನೆಯ ಕಾರ್ಯಕ್ರಮವನ್ನು ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. 2030ರ ಅಂತ್ಯಕ್ಕೆ ಆತ್ಮಹತ್ಯೆ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಬೇಕು ಎಂಬ ಧ್ಯೇಯವನ್ನು ಇಟ್ಟುಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಆತ್ಮಹತ್ಯೆ ತಡೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.
‘ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಾವು ಕರ್ತವ್ಯದ ವೇಳೆ ಸಂಪರ್ಕಿಸುವ ಮಕ್ಕಳು ಮತ್ತು ಸಾರ್ವಜನಿಕರಿಗೆ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಲಿ ಎಂಬುದು ಈ ಕಾರ್ಯಗಾರದ ಉದ್ದೇಶವಾಗಿದೆ. ಹಾಗಾಗಿ, ಸಮಸ್ಯೆಯಲ್ಲಿರುವವರನ್ನು ಗುರುತಿಸಿ ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಬೇಕು. ಆಗ ಅವರ ಸಮಸ್ಯೆಯನ್ನು ಬಗೆಹರಿಸಿ ಆತ್ಮಹತ್ಯೆ ತಡೆಗಟ್ಟಬಹುದು’ ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶಿವಕುಮಾರ್, ಸುರಕ್ಷಾ ಯೋಜನೆಯ ಡಾ. ಆರ್ಯ ತಿರುಮೇನಿ, ಡಾ. ಅರವಿಂದ್, ಮಹೇಂದ್ರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ, ಹಿಮಾಲಯ ವೆಲ್‌ನೆಸ್ ಕಂಪನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಾನಸಿಕ ಆರೋಗ್ಯ ವಿಭಾಗದ ಸಹಯೋಗದೊಂದಿಗೆ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.