ADVERTISEMENT

ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ಪಕ್ಷ ಬೆಂಬಲಿಸಿ: ಜ್ಯೋತಿಪ್ರಕಾಶ್ ಮಿರ್ಜಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 14:11 IST
Last Updated 14 ಅಕ್ಟೋಬರ್ 2018, 14:11 IST
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿದರು
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿದರು   

ರಾಮನಗರ : ವೀರಶೈವ ಲಿಂಗಾಯತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ಪಕ್ಷಗಳನ್ನು ಚುನಾವಣಾ ಸಂದರ್ಭದಲ್ಲಿ ಬೆಂಬಲಿಸಬೇಕು ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು.

ಇಲ್ಲಿನ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸ್ಥಳೀಯ ಮುಖಂಡರು ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಪೂರಕವಾಗುವಂತೆ ಯೋಚನೆ ಮಾಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ADVERTISEMENT

ರಾಮನಗರ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಸೂಕ್ತ ಸ್ಥಾನಮಾನಗಳನ್ನು ಯಾವ ರಾಜಕೀಯ ಪಕ್ಷವೂ ನೀಡಿಲ್ಲ. ಮುಂದಿನ ದಿನಗಳಲ್ಲಾದರೂ ಈ ಭಾಗದ ಸಮುದಾಯದ ಜನರು ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಸಮುದಾಯದವರಲ್ಲಿಯೂ ಬಡವರಿದ್ದಾರೆ. ಸರ್ಕಾರದ ವತಿಯಿಂದ ಜಾರಿಯಾಗಿರುವ ಯೋಜನೆಗಳು ಇಂತಹವರನ್ನು ತಲುಪುವಂತೆ ಮಾಡಬೇಕು. ಪ್ರತಿ ತಿಂಗಳು ಒಕ್ಕೂಟದ ಪದಾಧಿಕಾರಿಗಳು ಸಭೆ ಸೇರಿ ಸಮುದಾಯದ ಅಭಿವೃದ್ಧಿಗಾಗಿ ಕಾರ್ಯ ರೂಪಿಸಬೇಕು ಎಂದು ತಿಳಿಸಿದರು.

ಗಾಂಧಿ ಮಾದರಿ : ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗಾಗಿ ಗಾಂಧಿ ಮಾದರಿಯಲ್ಲಿ ಚಳವಳಿಯಲ್ಲಿ ಮಾಡಲಾಗುವುದು. ವೀರಶೈವ ಸಮಾಜದಲ್ಲಿ ಸಂಘಟನೆ, ದೃಢ ನಿರ್ಧಾರ, ಶಿಸ್ತು ಇದ್ದರೆ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

‘ವೀರಶೈವ ಧರ್ಮ, ಸಂಸ್ಕೃತಿ, ಗುರುಹಿರಿಯರ ಪರಂಪರೆಯನ್ನು ಯುವಕರಿಗೆ ತಿಳಿಸಬೇಕಾಗಿದೆ. ಭೂತಕಾಲದ ಬಗ್ಗೆ ಚಿಂತಿಸದೆ ಭವಿಷ್ಯ ಕಾಲದ ಬಗ್ಗೆ ಚಿಂತನೆ ಮಾಡಬೇಕಾಗಿದೆ. ವೀರಶೈವ ಸಮಾಜ ದೊಡ್ಡ ಸಮಾಜವಾಗಿದ್ದು, ನಮಗೆ ಸಿಗಬೇಕಾದ ಸೌಲಭ್ಯಗಳು ದೊರೆಯದೇ ಇರುವುದು ವಿಷಾದಕರ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಒಕ್ಕೂಟದ ಪದಾಧಿಕಾರಿಗಳಾದ ಚಂದ್ರಣ್ಣ, ರಾಜಶೇಖರ್, ನಟರಾಜ್, ಮಂಜುನಾಥ್, ಎ.ಜೆ. ಸುರೇಶ್, ಪಿ. ಶಿವಾನಂದ, ಶಿವಕುಮಾರಸ್ವಾಮಿ, ಎ.ಎಸ್.ಶಿವಕುಮಾರ್, ವಿಜಯ್‌ಕುಮಾರ್, ರಾ.ಶಿ. ಬಸವರಾಜು, ಶಿವಸ್ವಾಮಿ ಮಾದಾಪುರ, ಪಂಡಿತಾರಾಧ್ಯ, ಶಿವಸ್ವಾಮಿ ಅಕ್ಕೂರು, ಮಹದೇವಶಾಸ್ತ್ರಿ, ನಿರ್ಮಲ, ಶಂಕರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.