ಮಾಗಡಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಶಿಕ್ಷಕರು ಸಮೀಕ್ಷೆಗೆ ಗೈರು ಆಗುವ ಮೂಲಕ ಗುರುವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸಮೀಕ್ಷೆಗೆ ಸರ್ಕಾರ ಸಿದ್ಧ ಪಡಿಸಿರುವ ಆ್ಯಪ್ ಸರಿಯಾಗಿ ಕೆಲಸ ಮಾಡದ ಕಾರಣ ಸಮೀಕ್ಷೆಗೆ ತೊಂದರೆಯಾಗುತ್ತಿದೆ. ಕೂಡಲೇ ತಾಂತ್ರಿಕ ಸಮಸ್ಯೆ ಸರಿಪಡಿಸುವಂತೆ ಶಿಕ್ಷಕರು ತಹಶೀಲ್ದಾರ್ ಶರತ್ ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜೈಪಾಲ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಇಂಟರ್‌ನೆಟ್ ಸಮಸ್ಯೆ ಇದೆ. ಇದರಿಂದ ಮೊಬೈಲ್ ಆ್ಯಪ್ ಸಮರ್ಕವಾಗಿ ಕೆಲಸ ಮಾಡುತ್ತಿಲ್ಲ. ಆಫ್‌ಲೈನ್ ನಲ್ಲಿ ನಮೂದಿಸಲು ಅವಕಾಶ ನೀಡಬೇಕು. ಗಣತಿ ಸಮಯದಲ್ಲಿ ಯುಎಚ್‌ಡಿ ಮೂಲಕ ಮನೆ ಗುರುತಿಸಲು ಸಾಧ್ಯವಾಗುತ್ತಿಲ್ಲ.
ಸಮೀಕ್ಷೆ ಸಮಯದಲ್ಲಿ ಒಟಿಪಿ ಸಮಸ್ಯೆ ಎದುರಾಗುತ್ತಿದೆ. ಅಂಗವಿಕಲ ಶಿಕ್ಷಕರು ಹಾಗೂ 55 ವರ್ಷ ದಾಟಿದ ಶಿಕ್ಷಕರಿಗೆ ವಿನಾಯಿತಿ ನೀಡುವುದು ಸೇರಿದಂತೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು.
ತಾಲ್ಲೂಕಿನಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಆ್ಯಪ್‌ನಲ್ಲಿ ದೋಷ ಕಂಡು ಬಂದಿದೆ. ಅಧಿಕಾರಿಗಳ ತುರ್ತುಸಭೆ ಕರೆದು ಸಂಜೆ ಒಳಗೆ ಸಮಸ್ಯೆ ಬಗೆಹರಿಸಲಾಗುವುದು. ನಾಳೆಯಿಂದ ಸಮೀಕ್ಷೆ ಎಂದಿನಂತೆ ನಡೆಯಲಿದೆ ಎಂದು ತಹಶೀಲ್ದಾರ್ ಭರವಸೆ ನೀಡಿದರು.
ಸೆ.22ರಿಂದ ಸಮೀಕ್ಷೆ ಆರಂಭವಾಗಿದ್ದರೂ ಆ್ಯಪ್ ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಸಮೀಕ್ಷೆ ಕಾರ್ಯಕ್ಕೆ ತೊಡಕು ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.