ADVERTISEMENT

ಅಮಾನತುಗೊಂಡಿದ್ದ ಪಿಡಿಒ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 6:05 IST
Last Updated 1 ಮೇ 2022, 6:05 IST
ರವಿಕುಮಾರ್
ರವಿಕುಮಾರ್   

ರಾಮನಗರ: ಇ-ಖಾತೆ ಅಕ್ರಮ ಆರೋಪದ ಮೇಲೆ ಅಮಾನತುಗೊಂಡಿದ್ದ ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ಜೆ.ಡಿ. ರವಿಕುಮಾರ್ (41) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನಕಪುರ ತಾಲ್ಲೂಕಿನ ಕೊಳ್ಳಿಗನಹಳ್ಳಿ ನಿವಾಸದಲ್ಲಿರುವ ಅವರ ಮಾವನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 2011ರಲ್ಲಿ ಪಿಡಿಒ ಹುದ್ದೆಗೆ ಸೇರಿದ್ದ ರವಿಕುಮಾರ್ ಗುರುವಾರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು.ಶನಿವಾರ ಮತ್ತೆ ವಿಚಾರಣೆಗೆ ಹೋಗಬೇಕಿತ್ತು. ವಿಚಾರಣೆ ದಿನದಂದೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮಾನತು ಏಕೆ?: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರ ಹೆಸರಿಗೆ 36 ಇ–ಖಾತೆ ಮಾಡಿಕೊಡಲಾಗಿತ್ತು. ಇ–ಸ್ವತ್ತು ಸರ್ವರ್ ದುರ್ಬಳಕೆ ಮಾಡಿಕೊಂಡು, ತಮ್ಮ ಗಮನಕ್ಕೆ ಬಾರದೆಯೇ ಬೇರೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಪೊಲೀಸರಿಗೆ ದೂರು ಸಲ್ಲಿಸಿದ್ದರು.

ADVERTISEMENT

ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಹಾರೋಹಳ್ಳಿ ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷರ ಹೆಸರಿನಲ್ಲಿದ್ದ ಇಂಟರ್‌ನೆಟ್‌ ಡಾಂಗಲ್‌ ಕಾರ್ಡ್‌ ಬಳಸಿ ಲಾಗಿನ್‌ ಆಗಿ ಈ ಕೃತ್ಯ ಎಸಗಿರುವುದು ಕಂಡುಬಂದಿತ್ತು. ಈ ಅಕ್ರಮದಲ್ಲಿ ಅಲ್ಲಿನವರ ಜೊತೆಗೆ ಬೈರಮಂಗಲ ಪಿಡಿಒ ರವಿಕುಮಾರ್‌ ಸಹ ಭಾಗಿಯಾಗಿದ್ದರು ಎನ್ನಲಾಗಿದೆ.

ಕಳೆದ ಮಾರ್ಚ್‌ನಲ್ಲಿ ಬೈರಮಂಗಲ ಗ್ರಾ.ಪಂ. ಕಚೇರಿ ಮೇಲೆ ದಾಳಿ ನಡೆಸಿದ್ದ ಬೆಂಗಳೂರು ಪೂರ್ವ ಸೈಬರ್ ಠಾಣೆ ಪೊಲೀಸರು ಅಲ್ಲಿನ ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆರೋಪಿ ರವಿಕುಮಾರ್ ತಲೆಮರೆಸಿಕೊಂಡಿದ್ದು, ನಂತರದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಸರ್ಕಾರ ಈಚೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.