ADVERTISEMENT

ಗಡಿ ಗ್ರಾಮಕ್ಕೆ ತಹಶೀಲ್ದಾರ್‌ ಭೇಟಿ

ರೈತರ ಸಾಗುವಳಿ ಚೀಟಿ ಪರಿಶೀಲನೆ: ಖಾತೆ ಮಾಡಿಕೊಡಲು ಕ್ರಮ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:15 IST
Last Updated 4 ಸೆಪ್ಟೆಂಬರ್ 2021, 3:15 IST
ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಭೇಟಿ ನೀಡಿ ಸಾಗುವಳಿ ಚೀಟಿ ಪರಿಶೀಲಿಸಿದರು
ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಭೇಟಿ ನೀಡಿ ಸಾಗುವಳಿ ಚೀಟಿ ಪರಿಶೀಲಿಸಿದರು   

ಕನಕಪುರ: ತಾಲ್ಲೂಕಿನ ಗಡಿ ಗ್ರಾಮಗಳು ತಾಲ್ಲೂಕು ಕೇಂದ್ರದಿಂದ ತುಂಬಾ ದೂರವಿವೆ. ರೈತರು ತಮ್ಮ ಕೆಲಸ ಕಾರ್ಯಗಳಿಗೆ ನಗರಕ್ಕೆ ಬಂದು ಹೋಗುವುದು ತುಂಬಾ ಕಷ್ಟವಿದೆ. ತಾಲ್ಲೂಕು ಆಡಳಿತವೇ ತಿಂಗಳಲ್ಲಿ ಒಂದು ದಿನ ಗಡಿಗ್ರಾಮ ಹಾಗೂ ಪಂಚಾಯಿತಿ ಕೇಂದ್ರ ಸ್ಥಾನಗಳಿಗೆ ಹೋಗಿ ರೈತರ ಕೆಲಸ ಮಾಡಿಕೊಡಲಿದೆ ಎಂದು ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ತಿಳಿಸಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಶಿವನೇಗೌಡನದೊಡ್ಡಿ, ಉಯ್ಯಂಬಳ್ಳಿದೊಡ್ಡಿ, ಅರೆಮೇಗಳದೊಡ್ಡಿ ಗ್ರಾಮಗಳಿಗೆ ಉಪ ತಹಶೀಲ್ದಾರ್‌ ಶರತ್‌ಬಾಬು, ಆರ್‌ಐ ನಾಗರಾಜು ಮತ್ತು ವಿಎ ಗಿರೀಶ್‌ ಅವರೊಂದಿಗೆ ಗುರುವಾರ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದ ಬಳಿಕ ಅವರು ಮಾತನಾಡಿದರು.

ಈ ಗ್ರಾಮಗಳು ತಾಲ್ಲೂಕು ಕೇಂದ್ರ ಸ್ಥಾನದಿಂದ ತುಂಬಾ ದೂರವಿದೆ. ಇಲ್ಲಿನ ರೈತರು ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಸಾಗುವಳಿ ಚೀಟಿ ಪಡೆದಿದ್ದರೂ ಇಲ್ಲಿಯವರೆಗೂ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿಲ್ಲ ಎಂದರು.

ADVERTISEMENT

ಪಹಣಿಯಲ್ಲಿರುವ ಸಣ್ಣಪುಟ್ಟ ಲೋಪದೋಷಗಳನ್ನು ರೈತರು ತಿದ್ದುಪಡಿ ಮಾಡಿಸಿಕೊಂಡಿಲ್ಲ. ವಯಸ್ಸಾದ ಆರ್ಹರು ಇಲ್ಲಿವರೆಗೂ ವೃದ್ಧಾಪ್ಯ ವೇತನ ಮಾಡಿಸಿಕೊಂಡಿಲ್ಲ. ಅವಿದ್ಯಾವಂತರಾಗಿದ್ದು ತಾಲ್ಲೂಕು ಕಚೇರಿಗೆ ಬಂದು ತಮ್ಮ ಸಮಸ್ಯೆ ಸರಿಪಡಿಸಿಕೊಳ್ಳಲು ಕಷ್ಟವಾಗಿದೆ. ಇಲ್ಲಿಗೆ ಬಂದಾಗ ಇದು ನಮ್ಮ ಗಮನಕ್ಕೆ ಬಂದಿದೆ ಎಂದು
ಹೇಳಿದರು.

25ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ಒಂದು ತಿಂಗಳ ಒಳಗೆ ಪರಿಹರಿಸಿ ಕೊಡಲಾಗುವುದು. ಇದೇ ರೀತಿ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿನ ರೈತರ ಮನೆ ಬಾಗಿಲಿಗೆ ತಾಲ್ಲೂಕು ಆಡಳಿತವೇ ಹೋಗಿ ಅವರ ಕೆಲಸ ಮಾಡಿಕೊಡಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.