ADVERTISEMENT

ಕನಕಪುರ | ಟಿಎಪಿಸಿಎಂಎಸ್ ಚುನಾವಣೆ: ‘ಕೈ’ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:04 IST
Last Updated 26 ನವೆಂಬರ್ 2025, 5:04 IST
ಕನಕಪುರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಮತದಾನ ಮಾಡಿರುವುದನ್ನು ತೋರಿಸಿದರು
ಕನಕಪುರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಮತದಾನ ಮಾಡಿರುವುದನ್ನು ತೋರಿಸಿದರು   

ಕನಕಪುರ: ಇಲ್ಲಿನ ರೈಸ್ ಮಿಲ್ ಬಳಿ ಇರುವ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯು ಮಂಗಳವಾರ ಅತ್ಯಂತ ಬಿರುಸಿನಿಂದ ನಡೆಯಿತು. ಆಡಳಿತ ಮಂಡಳಿಗೆ 12 ನಿರ್ದೇಶಕರ ಆಯ್ಕೆ ಮಾಡಬೇಕಿದ್ದು ಅದರಲ್ಲಿ 9 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಸಾಮಾನ್ಯ ಎರಡು ಸ್ಥಾನ, ಹಿಂದುಳಿದ ‘ಬಿ’ ವರ್ಗದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಸಾಮಾನ್ಯ ವರ್ಗದ ಎರಡು ಸ್ಥಾನಕ್ಕೆ ಐವರು, ಹಿಂದುಳಿದ ‘ಎ’ ವರ್ಗದ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. 311 ಮತದಾರರಿದ್ದು 304 ಮತಗಳು ಚಲಾವಣೆಯಾಗಿ ಶೇಕಡ 99ರಷ್ಟು ಮತದಾನವಾಯಿತು.

ADVERTISEMENT

ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಿ.ಎ ದೇವರಾಜು, ಚಿಕ್ಕೋನು, ಎಸ್.ಮಹೇಶ್ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಸಹಕಾರ ಇಲಾಖೆ ಮಂಜುನಾಥ್ ಚುನಾವಣಾ ಅಧಿಕಾರಿಯಾಗಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ಸಿ.ಆಶಾ ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮತದಾನ ಮಾಡಿದ ಡಿಕೆಶಿ:

ಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದರು.

ನಂತರ ಮಾತನಾಡಿ, ‘ಕಾರ್ಯಕರ್ತರು ನಮ್ಮ ಶಕ್ತಿಯಾಗಿ ಚುನಾವಣೆಗಳಲ್ಲಿ ಕೆಲಸ ಮಾಡುತ್ತಾರೆ. ಅವರ ಚುನಾವಣೆಗೆ ನಾವು ಬಂದು ಮತದಾನ ಮಾಡುವ ಮೂಲಕ ಅವರಿಗೆ ಶಕ್ತಿ ನೀಡಬೇಕಿದೆ. ಇದಕ್ಕಾಗಿ ಬಂದು ಮತದಾನ ಮಾಡಿದ್ದೇವೆ’ ಎಂದರು.

ಸ್ಥಳೀಯ ಚುನಾವಣೆ ಪಕ್ಷದ ಆಧಾರ. ಯಾವ ಚುನಾವಣೆಯೂ ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರತಿಯೊಂದು ಚುನಾವಣೆಯನ್ನು ಚುನಾವಣೆಯಾಗಿ ಎದುರಿಸಬೇಕಿದೆ ಎಂದು ತಿಳಿಸಿದರು.

‘ಈ ಚುನಾವಣೆಯಲ್ಲಿ ರಾಜಿ ಮಾಡಿಕೊಳ್ಳಬಹುದಿತ್ತು. ಆದರೆ, ಚುನಾವಣೆಯಲ್ಲಿ ನಮ್ಮ ಪರವಾಗಿ ಅಥವಾ ವಿರುದ್ಧವಾಗಿ ಯಾರಿದ್ದಾರೆ ಎಂದು ತಿಳಿಯುತ್ತದೆ. ಡಿ.ಕೆ.ಸುರೇಶ್ ಅವರ ಚುನಾವಣೆಯಿಂದ ನಾವು ಎಚ್ಚೆತ್ತುಕೊಂಡಿದ್ದೇವೆ. ಕಾರ್ಯಕರ್ತರ ಚುನಾವಣೆಯಾಗಲಿ, ನಮ್ಮ ಚುನಾವಣೆಯಾಗಲಿ ನಿರ್ಲಕ್ಷ್ಯ ಮಾಡುವುದಿಲ್ಲ’ಎಂದು ಹೇಳಿದರು.

ಮಾಜಿ ಸಂಸದ ಡಿ‌.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್ ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

12ಕ್ಕೆ 12 ಸ್ಥಾನ ಗೆಲುವು 

ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಉಳಿದ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸುವ ಮೂಲಕ ಟಿಎಪಿಸಿಎಂಎಸ್ 12ಕ್ಕೆ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.

ಚುನಾವಣೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮತದಾನ ಮಾಡಿದರು
ಕನಕಪುರ ಟಿಪಿಎಪಿಸಿಎಂಎಸ್ ನೂತನ ನಿರ್ದೇಶಕರಾಗಿ ಆಯ್ಕೆಯಾದವರೊಂದಿಗೆ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.