ರಾಮನಗರ: ನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟದ ತಪ್ಪಲಿನಲ್ಲಿರುವ ಹಳ್ಳಿಮಾಳ ಗ್ರಾಮದ ಬಳಿಯ ಕಡೇ ಬಾಗಿಲು ಆಂಜನೇಯಸ್ವಾಮಿ ಗುಡಿಯೊಳಗೆ ದುಷ್ಕರ್ಮಿಗಳು ನಿಧಿಗಾಗಿ ಗುಂಡಿ ತೋಡಿ, ದೇವರ ಮೂರ್ತಿಯನ್ನು ವಿರೂಪಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ದುಷ್ಕರ್ಮಿಗಳು ಹುಣ್ಣಿಮೆ ರಾತ್ರಿಯಾದ ಜುಲೈ 10ರಂದು ದೇವಾಲಯಕ್ಕೆ ಬಂದು ಸುಮಾರು 10 ಅಡಿಯಷ್ಟು ಆಳದ ಗುಂಡಿ ತೆಗೆದು ನಿಧಿಗಾಗಿ ಶೋಧ ನಡೆಸಿದ್ದಾರೆ. ಏನೂ ಸಿಗದಿದ್ದಾಗ ಗುಂಡಿಯನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ದನ ಕಾಯುವವರು ಶನಿವಾರ ದೇವಾಲಯದ ಕಡೆಗೆ ಹೋಗಿದ್ದಾಗ ವಿಷಯ ಗೊತ್ತಾಗಿದೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
ನಿಧಿಗಾಗಿ ದುಷ್ಕರ್ಮಿಗಳು ನಡೆಸಿರುವ ಕೃತ್ಯವನ್ನು ದನ ಕಾಯುವವರು ಗ್ರಾಮಸ್ಥರಿಗೆ ಬಂದು ತಿಳಿಸಿದ್ದಾರೆ. ಬಳಿಕ ಊರಿನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಾಮದೇವರ ಬೆಟ್ಟದ ತಪ್ಪಲಿನಲ್ಲಿರುವ ಬೆಟ್ಟಕ್ಕೆ ತೆರಳುವ ಮೂಲ ಹಾದಿಯಲ್ಲಿ ಪುರಾತವಾದ ಆಂಜನೇಯ ದೇವಾಲಯವಿದೆ ಎಂದು ಹೇಳಿದರು.
ಪಾಳು ಬಿದ್ದಂತಿದ್ದ ದೇವಾಲಯವನ್ನು ಗ್ರಾಮಸ್ಥರೇ ಜೀರ್ಣೋದ್ಧಾರ ಮಾಡಿದ್ದರು. ಶ್ರಾವಣ ಮಾಸದ ಮೊದಲ ಶನಿವಾರ ಗ್ರಾಮಸ್ಥರು ಆಂಜನೇಯಸ್ವಾಮಿ ಪರ ಮಾಡಿ, ನಂತರದ ಶನಿವಾರಗಳಲ್ಲಿ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.