ADVERTISEMENT

ಗ್ರಾಮಸ್ಥರ ಸಮಸ್ಯೆ ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ

ಸುಂಡಘಟ್ಟದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 4:34 IST
Last Updated 22 ಜನವರಿ 2023, 4:34 IST
ಕನಕಪುರ ಸುಂಡಘಟ್ಟ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಉದ್ಘಾಟಿಸಿದರು
ಕನಕಪುರ ಸುಂಡಘಟ್ಟ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಉದ್ಘಾಟಿಸಿದರು   

ಕನಕಪುರ: ತಾಲ್ಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮಾತನಾಡಿ, ‘ಕಚೇರಿಯಿಂದ ಕಚೇರಿಗೆ ರೈತರ ಅಲೆದಾಟ ತಪ್ಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಚೇರಿಗಳಲ್ಲಿ ಅಧಿಕಾರಿಗಳು ಒಬ್ಬೊಬ್ಬರ ಸಮಸ್ಯೆ ಕೇಳಿದರೆ, ಅವುಗಳು ಮುಗಿಯುವುದಿಲ್ಲ. ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರಕ್ಕೆ ಸುತ್ತಬೇಕಾಗುವ ಅನಿವಾರ್ಯತೆ ಎದುರಾಗಲಿದೆ. ಇಂಥ ಹಲವು ಸಮಸ್ಯೆಗಳಿಗೆ ಈ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಪರಿಹಾರ ನೀಡಲಾಗುತ್ತದೆ ಎಂದರು.

ADVERTISEMENT

ಇಲ್ಲಿಯೇ ಪರಿಹರಿಸಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತದೆ. ಅಗತ್ಯಬಿದ್ದರೆ, ಸರ್ಕಾರದ ಹಂತದಲ್ಲಿ ಪರಿಹರಿಸಬೇಕಾದ ಸಮಸ್ಯೆಗಳಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ, ಪರಿಹರಿಸಲಾಗುತ್ತದೆ ಎಂದರು.

ಈ ವೇಳೆ ಸುಂಡಘಟ್ಟ, ಗೌಡಳ್ಳಿ, ಬಾಹಳ್ಳಿ, ಮಾವತ್ತೂರು, ಬೆಟ್ಟೇಗೌಡನದೊಡ್ಡಿ ಗ್ರಾಮಗಳಲ್ಲಿ ಆನೆಗಳ ಕಾಟ ಹೆಚ್ಚಿದ್ದು, ಅವುಗಳ ಬಗ್ಗೆ ಗಮನಹರಿಸಬೇಕೆಂಬ ಹಲವಾರು ದೂರುಗಳು ಕೇಳಿ ಬಂದವು. ಪಿಂಚಣಿ, ಸ್ಮಶಾನ ಸಮಸ್ಯೆಗಳು, ಚೀರಣಕುಪ್ಪೆ ಗ್ರಾಮದಲ್ಲಿ ಶಾಲೆ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಆರೋಗ್ಯ ಇಲಾಖೆ ವತಿಯಿಂದ ಉಚಿತ ಅರೋಗ್ಯ ಶಿಬಿರ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಕೋವಿಡ್ ಲಸಿಕಾ ಅಭಿಯಾನ, ಪೋಷಣ್ ಮಾಸಾಚರಣೆ ಅಭಿಯಾನ, ವಿವಿಧ ಇಲಾಖೆಗಳಿಂದ ದೊರೆಯುವ ಸವಲತ್ತು ಕುರಿತು ಜನರಿಗೆ ತಿಳಿಸಿಕೊಡಲಾಯಿತು.

ಗ್ರೇಡ್‌ -2 ತಹಶೀಲ್ದಾರ್‌ ಶಿವಕುಮಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭೈರಪ್ಪ, ಆರ್‌ಐ ಶಿವರುದ್ರಪ್ಪ, ಗ್ರಾ. ಪಂ ಅಧ್ಯಕ್ಷೆ ಜೈಶೀಲಾ, ಪಿಡಿಒ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು, ಕಂದಾಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆಯವರು, ಸಾರ್ವಜನಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.