ADVERTISEMENT

ಶೇ 23ರಷ್ಟು ಯುವಜನರಿಗೆ ಮೊದಲ ಡೋಸ್‌

ಲಸಿಕೆ ಅಭಿಯಾನ ಚುರುಕು: ಶೇ 78ರಷ್ಟು ಹಿರಿಯರಿಗೆ ಸಿಕ್ಕಿದೆ ಚುಚ್ಚುಮದ್ದು

ಆರ್.ಜಿತೇಂದ್ರ
Published 4 ಜುಲೈ 2021, 8:45 IST
Last Updated 4 ಜುಲೈ 2021, 8:45 IST
ಶಿಬಿರವೊಂದರಲ್ಲಿ ಲಸಿಕೆ ಪಡೆಯುತ್ತಿರುವ ಕಾಲೇಜು ವಿದ್ಯಾರ್ಥಿನಿ
ಶಿಬಿರವೊಂದರಲ್ಲಿ ಲಸಿಕೆ ಪಡೆಯುತ್ತಿರುವ ಕಾಲೇಜು ವಿದ್ಯಾರ್ಥಿನಿ   

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಏರುಗತಿಯಲ್ಲಿ ಸಾಗಿದ್ದು, 18ರಿಂದ 44 ವಯಸ್ಸಿನ ಶೇ 23ರಷ್ಟು ಯುವಜನರು ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

ಸದ್ಯ ಎಲ್ಲೆಡೆ ಕೋವಿಡ್ ಲಸಿಕೆಗೆ ಅಭಾವ ಉಂಟಾಗಿದೆ. ಆದಾಗ್ಯೂ ರಾಮನಗರದಲ್ಲಿ ಅಗತ್ಯ ಪ್ರಮಾಣದ ದಾಸ್ತಾನು ಇದ್ದು, ಹೆಚ್ಚಿನ ತೊಂದರೆ ಆಗಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಶುಕ್ರವಾರ ಜಿಲ್ಲೆಯಲ್ಲಿ 7,561 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಪ್ರತಿದಿನ ಸರಾಸರಿ 7,500–8,000 ಜನರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.

ಆದ್ಯತಾ ವಲಯ: ಈವರೆಗೂ ಜಿಲ್ಲೆಯಲ್ಲಿ ಆದ್ಯತಾ ವಲಯಗಳಲ್ಲಿ ದುಡಿಯುತ್ತಿರುವ ಯುವಜನರಿಗೆ ಲಸಿಕೆ ನೀಡಲು ಪ್ರಾಶಸ್ತ್ಯ ನೀಡಲಾಗುತ್ತಿದೆ. ಈ ವಯಸ್ಸಿನವರ ವಿಭಾಗದಲ್ಲಿ ಒಟ್ಟಾರೆ 1.17 ಲಕ್ಷ ಮಂದಿಗೆ ಈವರೆಗೆ ಕೋವಿಡ್‌ ಲಸಿಕೆ ದೊರೆತಿದೆ. ಅದರಲ್ಲಿ 1.15 ಲಕ್ಷ ಮಂದಿ ಈ ವಿವಿಧ ಆದ್ಯತಾ ವಲಯಗಳಿಗೆ ಸೇರಿದವರಾಗಿದ್ದಾರೆ. ಮೇ 10ರಿಂದಲೇ 18 ವಯಸ್ಸಿನ ಮೇಲ್ಪಟ್ಟ ಎಲ್ಲರಿಗೆ ಲಸಿಕೆ ನೀಡುವ ಕಾರ್ಯಕ್ರಮ ಚಾಲ್ತಿಯಲ್ಲಿ ಆದೆ. ಆದಾಗ್ಯೂ ಯಾವುದೇ ಆದ್ಯತಾ ವಲಯಕ್ಕೆ ಸೇರದ 1,653 ಮಂದಿಯಷ್ಟೇ ಈವರೆಗೆ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಅಂಕಿ–ಅಂಶಗಳೇ ಹೇಳುತ್ತಿವೆ.

ADVERTISEMENT

ಶೇ 78 ಸಾಧನೆ: ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರ ಪೈಕಿ ಶೇ 78ರಷ್ಟು ಜನರು ಈವರೆಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. ಇವರಲ್ಲಿ ಶೇ 31ರಷ್ಟು ಜನರು ಮಾತ್ರವೇ ಎರಡನೇ ಡೋಸ್‌ ಪಡೆದಿದ್ದಾರೆ. ಇನ್ನೂ 70 ಸಾವಿರ ಮಂದಿಗೆ ಮೊದಲ ಡೋಸ್ ಲಸಿಕೆ ಸಹ ಸಿಕ್ಕಿಲ್ಲ.

ವಾಹನದ ವ್ಯವಸ್ಥೆ: ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ಮತ್ತು ಕರ್ಫ್ಯೂ ನಿಯಮಗಳು ಜಾರಿಯಲ್ಲಿದ್ದವು. ಈ ಸಂದರ್ಭ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದ್ದು, ಜನರು ನಾಲ್ಕಾರು ಕಿ.ಮೀ. ದೂರದ ಲಸಿಕಾ ಕೇಂದ್ರಗಳಿಗೆ ಬರುವುದೇ ದುಸ್ತರವಾಗಿತ್ತು. ಇದನ್ನು ಅರಿತು ಜಿಲ್ಲಾಡಳಿತವು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಇದೀಗ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಇದಕ್ಕಾಗಿ 8ಕ್ಕೂ ಹೆಚ್ಚು ವಾಹನಗಳನ್ನು ಮೀಸಲಿಡಲಾಗಿದೆ. ಇವುಗಳು ಹಳ್ಳಿಗಳಿಗೆ ತೆರಳಿ ಜನರನ್ನು ಅವರ ಮನೆಗಳಿಂದ ಲಸಿಕೆ ಕೇಂದ್ರಕ್ಕೆ ಕರೆತಂದು, ಲಸಿಕೆ ಹಾಕಿಸಿದ ನಂತರ ಮನೆ ಬಾಗಿಲಿಗೇ
ಬಿಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.