ADVERTISEMENT

ಮರಳವಾಡಿ ಶಿವಮಠದಲ್ಲಿ ಶರಣ ಸಂಸ್ಕೃತಿ ಶಿಬಿರದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 2 ಮೇ 2022, 14:04 IST
Last Updated 2 ಮೇ 2022, 14:04 IST
ಮರಳವಾಡಿ ಶಿವಮಠದಲ್ಲಿ ನಡೆದ ಶರಣ ಸಂಸ್ಕೃತಿ ಸಭೆಯಲ್ಲಿ ಚನ್ನಬಸವಸ್ವಾಮಿ ಮಾತನಾಡಿದರು
ಮರಳವಾಡಿ ಶಿವಮಠದಲ್ಲಿ ನಡೆದ ಶರಣ ಸಂಸ್ಕೃತಿ ಸಭೆಯಲ್ಲಿ ಚನ್ನಬಸವಸ್ವಾಮಿ ಮಾತನಾಡಿದರು   

ಕನಕಪುರ: ‘ಸಾಧು-ಸಂತರು, ಪೂಜ್ಯರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದಾಗ ಮಾತ್ರ ನಮ್ಮ ಧರ್ಮ ಉನ್ನತಿಗೆ ಸಾಧ್ಯ’ ಎಂದು ದೇಗುಲಮಠ ಕಿರಿಯಶ್ರೀ ಚನ್ನಬಸವಸ್ವಾಮಿ ತಿಳಿಸಿದರು.

ತಾಲ್ಲೂಕಿನ ಮರಳವಾಡಿ ಮಠದಲ್ಲಿ ನಡೆದ ‘ಗುರು ನಿರ್ವಾಣ ನಿಲಯ’ ಉದ್ಘಾಟನೆ ಮತ್ತು ಶರಣ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಶ್ರೀಮಠದಲ್ಲಿ ಶರಣ ಸಂಸ್ಕೃತಿವಿಚಾರಧಾರೆ ಎರಡು ದಿನದಿಂದ ನಡೆಯುತ್ತಿದೆ. ನಮ್ಮ ಅಂತರಾತ್ಮದಲ್ಲಿ ಶರಣ ಜ್ಯೋತಿ ಹಚ್ಚುವ ಕೆಲಸ ನಡೆಯುತ್ತಿದೆ ಅದನ್ನು ತೆಗೆದುಕೊಳ್ಳುವುದು ನಮ್ಮ ಕೈಯಲ್ಲಿ. ಗಂಗಾ ನದಿ ಹರಿಯುತ್ತಿದೆ. ಅದನ್ನು ಹೇಗೆ ತೆಗೆದುಕೊಳ್ಳಬಹುದು. ಕೆಲವರು ದೊಡ್ಡ ಪಾತ್ರೆಗಳಲ್ಲಿ, ಕೆಲವರು ಚಿಕ್ಕ ಪಾತ್ರಗಳಲ್ಲಿ, ಕೆಲವರು ಚೊಂಬು ಅಥವಾ ಲೋಟದಲ್ಲಿ ತೆಗೆದುಕೊಳ್ಳಬಹುದು. ಅಂದರೆ ವಿಚಾರವನ್ನು ವಿಶಾಲ ಮನೋಭಾವದಿಂದ ಸ್ವೀಕರಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿದೆ’ ಎಂದು ಹೇಳಿದರು.

ADVERTISEMENT

‘ಮರಳವಾಡಿ ಮಠದ ಹಿರಿಯ ಪೂಜ್ಯರು ಶಿಬಿರಗಳನ್ನು 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಈಗ ಸಹಕಾರಿಯಾಗಿ ಕಿರಿಯಶ್ರೀ ಜತೆಯಾಗಿ ನಿಂತು ಶಿಬಿರವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇಲ್ಲಿ ಕೇಳಿದ ವಿಚಾರ ಯಾವಾಗ ನಾವು ಆಚರಣೆ ಮಾಡುತ್ತೇವೋ ಆಗ ಶಿಬಿರದ ಪರಿಪೂರ್ಣ ಎಂಬುದನ್ನು ನಾವೆಲ್ಲರೂ ಮನದಟ್ಟು ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಶಿವಮಠದ ಹಿರಿಯಶ್ರೀ ಮೃತ್ಯುಂಜಯ ಮಹಾಸ್ವಾಮಿ ಮಾತನಾಡಿ, ‘ಶಿವಾನುಭವ ಎನ್ನುವುದು ಕೇವಲ ಪ್ರಚಾರವಾದರಷ್ಟೇ ಸಾಲದು. ಅದು ಅನುಷ್ಠಾನದಲ್ಲಿಯೂ ಬರಬೇಕು. ಕ್ರಿಯೆ ಇಲ್ಲದ ಜ್ಞಾನ ಅಜ್ಞಾನವೆಂದು ಬಸವಣ್ಣನವರು ಸಾರಿದ್ದಾರೆ. ವೀರಶೈವ ಲಿಂಗಾಯತ ಸಂಸ್ಕಾರಗಳಲ್ಲಿ ಶಿವ ದೀಕ್ಷಾ ಸಂಸ್ಕಾರವು ಮಹತ್ವದ ಮೈಲಿಗಲ್ಲು ಹಾಗೂ ಜೀವನದಲ್ಲಿ ಮಹತ್ವದ ತಿರುವು’ ಎಂದರು.

‘ಈ ಸಂಸ್ಕಾರವನ್ನು ಪಡೆದ ಪ್ರತಿಯೊಬ್ಬ ಶಿವಾನುಭವ ಪಡೆಯುವುದರಿಂದ ಮಾತ್ರ ಅದರ ಪ್ರಯೋಜನವಾಗುವುದು. ಆದದರಿಂದ ಧಾರ್ಮಿಕ ಜೀವನದಲ್ಲಿ ಉನ್ನತ ಆದರ್ಶಗಳನ್ನು ಅಳವಡಿಸಿಕೊಂಡು ಸಾರ್ಥಕ ಹಾಗೂ ಪ್ರಗತಿಪರ ಜೀವನ ನಡೆಸುವನು. ಈ ಧ್ಯೇಯಗಳನ್ನು ಅನುಷ್ಠಾನದಲ್ಲಿ ತರಲು ಈಗಾಗಲೇ ಅನೇಕ ಮಠಗಳು ಕಾರ್ಯೋನ್ಮುಖವಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿರುವ ಮರಳವಾಡಿಯ ಶಿವಮಠವು ಇಂತಹ ಅನೇಕ ಶಿಬಿರ ಆಯೋಜಿಸಲಾಗಿದೆ’ ಎಂದರು

ಶಿವಮಠದ ಕಿರಿಯಶ್ರೀ ಪ್ರಭು ಕಿರೀಟಿಸ್ವಾಮಿ ಮಾತನಾಡಿ, ‘ಹಿರಿಯ ಶ್ರೀಗಳು ಧರ್ಮ ಗುರುಗಳಾಗಿ ಬಸವಾದಿ ಪ್ರಮಥರ ತತ್ವಗಳನ್ನು ಶರಣ ಸಮೂಹಕ್ಕೆ ತಲುಪಿಸುವ ಕಾರ್ಯವನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಅವರ ಆಶೀರ್ವಾದದಿಂದ ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಂತಹಆಚರಣೆಯನ್ನು ನಾವೂ ಕೂಡ ಮುನ್ನಡೆಸಿಕೊಂಡು ಹೋಗುವ ಆಶಯ ತಮ್ಮದಾಗಿದೆ’ ಎಂದು ತಿಳಿಸಿದರು.

‘ಗುರು ನಿರ್ವಾಣ ನಿಲಯ’ ಉದ್ಘಾಟನೆ ಮಾಡಿದ ಕೆ.ಆರ್.ಡಿ.ಸಿ.ಎಲ್. ಅಧ್ಯಕ್ಷ ಎಂ ರುದ್ರೇಶ್, ಶ್ರೀಮಠದ ಅಭಿವೃದ್ಧಿ ಕಾರ್ಯಗಳು ಹಾಗೂ ಸಮಾಜಮುಖಿಯಾದಂತಹ ಶಿಬಿರಗಳ ಆಯೋಜನೆ ಆಧುನಿಕ ಜೀವನ ಪದ್ಧತಿಗಳಿಂದ ಧರ್ಮ ಸಂಸ್ಕೃತಿ ಪರಂಪರೆ ಅವನತಿ ಆಗುತ್ತಿರುವ ಇಂತಹ ಸಂದರ್ಭದಲ್ಲಿ ಇಂತಹ ಶಿಬಿರಗಳು ಅನಿವಾರ್ಯವಾಗಿವೆ ಎಂದು ಹೇಳಿದರು

ಪ್ರಭು ಸ್ವಾಮೀಜಿ, ಸಾಹಿತಿ ಶಂಕರೇಗೌಡ ಬಿರಾದಾರ, ಇನ್‌ಸ್ಪೆಕ್ಟರ್ ಪ್ರಭುಸ್ವಾಮಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಸ್‌.ಜಗನ್ನಾಥ್ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಸಾಂಬಶಿವ, ಪ್ರಧಾನ ಕಾರ್ಯದರ್ಶಿ ಮುರುಡಿ ಗಣೇಶ್, ನಿವೃತ್ತ ಶಿಕ್ಷಕ ಎಸ್‌. ರೇವಣ್ಣ ದೇಗುಲಮಠದ ವಿಶ್ವನಾಥ್‌ಮೂರ್ತಿ, ಮಹಾಲಿಂಗಸ್ವಾಮಿ, ಗುರುಪಾದಸ್ವಾಮಿ, ಲೋಕೇಶ್, ಸುಹಾಶ್‌, ಮಹಾದೇವಸ್ವಾಮಿ, ಶಿವು, ಪೊಲೀಸ್ ಶಂಕರಪ್ಪ, ಅಂಬಿಕಾ ನಂಜಪ್ಪ, ಕಲ್ಲನಕುಪ್ಪೆ ಪಟೇಲರು, ಪಾಲಾಕ್ಷ, ನಂದಿನಿ, ಕಾವ್ಯ, ತೇಜಸ್, ಪವಿತ್ರ, ಗಣೇಶ, ಸುಮಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.