ADVERTISEMENT

ಸಾಂಘಿಕ ಯತ್ನವೇ ಪಕ್ಷದ ಸಾಧನೆ

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಿದ ರುದ್ರೇಶ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 3:05 IST
Last Updated 4 ಜನವರಿ 2021, 3:05 IST

ರಾಮನಗರ: ತಳಮಟ್ಟದ ಕಾರ್ಯಕರ್ತರು ಹಾಗೂ ಕೆಲವು ಮುಖಂಡರ ಪರಿಶ್ರಮದ ಫಲವಾಗಿ ಈ ಬಾರಿ ಗ್ರಾ.ಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 240ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ನೂತನ ಗ್ರಾ.ಪಂ ಸದಸ್ಯರು ಹಾಗೂ ಗೆಲುವಿಗೆ ಕಾರಣಕರ್ತರಾದ ಎಲ್ಲರೂ ಅಭಿನಂದನಾರ್ಹರು ಎಂದು ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಪಾದರಹಳ್ಳಿ ಸಮೀಪದ ಶಿಲ್ಹಾಂದರ ಖಾಸಗಿ ರೆಸಾರ್ಟ್ ನಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ ನೂತನ ಸದಸ್ಯರಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಈ ಹಿಂದಿನ ರಾಮನಗರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷನಾಗಿ ಪಕ್ಷದ ತಳಮಟ್ಟದ ಕಾರ್ಯಕರ್ತರು- ಮುಖಂಡರೊಡನೆ ತಮಗಿದ್ದ ಒಡನಾಟ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದನ್ನು ಸ್ಮರಿಸಿದ ಅವರು, ಅದರ ಪ್ರಯತ್ನದ ಫಲವಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ADVERTISEMENT

ತಾಲ್ಲೂಕಿನ ಪ್ರತಿಷ್ಠಿತ ಗ್ರಾ.ಪಂ ಮಾಯಗಾನಹಳ್ಳಿ ಹಾಗೂ ಕೈಲಾಂಚ ಹೋಬಳಿಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಕೆಯಾಗುವಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ, ಕೈಲಾಂಚ ಹೋಬಳಿ ಉಸ್ತುವಾರಿ ಡಿ.ನರೇಂದ್ರ, ಎಸ್.ಆರ್ ನಾಗರಾಜು, ಹಾರೋಹಳ್ಳಿ ಭಾಗದಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಮುರಳೀಧರ್ ಅವರ ಶ್ರಮ ಅಪಾರವಾಗಿದೆ ಎಂದು ಶ್ಲಾಘಿಸಿದರು.

ಅದೇ ರೀತಿ ಕನಕಪುರ ತಾಲ್ಲೂಕಿನಲ್ಲಿ ಜಗನ್ನಾಥ್ ಮತ್ತು ನಾಗಾನಂದ ತಮ್ಮ ಜವಾಬ್ದಾರಿ ಉತ್ತಮವಾಗಿ ನಿಭಾಯಿಸಿದ್ದಾರೆ. ಬಿಜೆಪಿ ಶೂನ್ಯವಾಗಿದ್ದ ತಾಲ್ಲೂಕಿನಲ್ಲಿ ಎರಡು ಪಂಚಾಯಿತಿಗಳಲ್ಲಿ ಅಧಿಕಾರದ ಸನಿಹಕ್ಕೆ ತಂದಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆಯಾಗಿದೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಶೂನ್ಯ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲುವು ಅಸಾಧ್ಯ ಎಂದು ವ್ಯಂಗ್ಯವಾಡುತ್ತಿದ್ದ ರಾಜಕೀಯ ವಿರೋಧಿಗಳಿಗೆ ಈ ಬಾರಿ ಗ್ರಾ.ಪಂ ಚುನಾವಣೆಯಲ್ಲಿ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ. ಮುಂಬರುವ ತಾ.ಪಂ, ಜಿ.ಪಂ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ನೂತನ ಗ್ರಾಪಂ ಸದಸ್ಯರನ್ನು ಎಂ.ರುದ್ರೇಶ್ ಅಭಿನಂದಿಸಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಮುರಳೀಧರ್, ಕನಕಪುರ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಬಿಡದಿ ಸ್ಮಾರ್ಟ್ ಸಿಟಿ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ, ರಾಮನಗರ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ, ಹಿರಿಯ ಮುಖಂಡ ಎಸ್.ಆರ್.ನಾಗರಾಜು, ಜಿಲ್ಲಾ ಮಾಧ್ಯಮ ಪ್ರಮುಖ್ ಚಂದ್ರಶೇಖರ ರೆಡ್ಡಿ, ಜಿಲ್ಲಾ ಜಾಗೃತಿ ಸೇವಾ ಸಮಿತಿ ಸದಸ್ಯ ಸಿ.ರಮೇಶ್‌, ಸದಸ್ಯ ಪ್ರವೀಣ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.