
ಚನ್ನಪಟ್ಟಣ: ರಂಗ ಕಲಾವಿದರಿಗೆ ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಭಾರತ ವಿಕಾಸ್ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ವಸಂತಕುಮಾರ್ ಬೇಸರ ವ್ಯಕ್ತಪಡಿಸಿದರು.
ನಗರದ ಕೊಲ್ಲಾಪುರದಮ್ಮ ದೇವಸ್ಥಾನ ಆವರಣದ ಡಾ.ರಾಜ್ ಕುಮಾರ್ ಬಯಲು ರಂಗಮಂದಿರದಲ್ಲಿ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ನೂರಾರು ಮಂದಿ ರಂಗ ಕಲಾವಿದರಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರ ಹಾಗೂ ಸಾರ್ವಜನಿಕರು ಮಾಡಬೇಕು ಎಂದರು.
ರಂಗ ಕಲಾವಿದ ಶ್ರೀರಾಮು ಕೊಳ್ಳಿಗನಹಳ್ಳಿ ಮಾತನಾಡಿ, ಬೊಂಬೆನಾಡಿನ ಕಲಾವಿದರು ಮೂರು ಪ್ರಕಾರಗಳಾದ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕ ಪ್ರದರ್ಶಿಸುವುದರಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದು ಪ್ರಶಂಸಿಸಿದರು.
ರಾಮನಗರ ಜಿಲ್ಲಾ ಕಲಾ ಬಳಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿ ಅರೆಹಳ್ಳಿ ಮಾತನಾಡಿ, ಕಲಾವಿದರು ಪರಸ್ಪರ ಅನ್ಯೋನ್ಯತೆಯಿಂದ ಒಗ್ಗೂಡಿ ಕಲಾ ಸರಸ್ವತಿ ಪ್ರೌಢಿಮೆ ಹೆಚ್ಚಿಸಬೇಕು. ಪೌರಾಣಿಕ ನಾಟಕಗಳಲ್ಲಿ ಬರುವ ಪಾತ್ರಗಳ ಸಾರ ಪ್ರತಿಯೊಬ್ಬರೂ ಅರಿತು ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಮುಖಂಡ ಎಲೆಕೇರಿ ರವೀಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದರಾದ ಗೋಪಾಲಗೌಡ, ತಿಮ್ಮರಾಜು, ಡಿ.ಪುಟ್ಟಸ್ವಾಮಿ, ಶಂಭೂಗೌಡ, ವಿ.ಸಿ.ಚಂದ್ರೇಗೌಡ, ಜಯಪ್ರಕಾಶ್, ಪುಟ್ಟರಾಜು, ಧನಂಜಯ ಬಿಡದಿ, ಗೋಪಾಲ್ ರಾಮನಗರ, ಎಸ್.ಶಿವಲಿಂಗಯ್ಯ, ವಿ.ಟಿ. ರಮೇಶ್, ಯೋಗಾನಂದ, ವೆಂಕಟೇಶ್, ಕೂಡ್ಲೂರು ವೆಂಕಟೇಶ್, ಚನ್ನರಾಯಪಟ್ಟಣದ ಶಂಕರೇಗೌಡ, ಚಂದನ ನಟರಾಜು, ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಗೌರವಾಧ್ಯಕ್ಷ ಪಿ. ಗುರುಮಾದಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.