ADVERTISEMENT

ಮಾನವೀಯ ಸಂಬಂಧ ಬೆಸೆಯುವ ರಂಗಭೂಮಿ: ಮಾಲತೇಶ ಬಡಿಗೇರ

‘ತಿಂಗಳ ಕಲಾ ಬೆಳಕು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 2:57 IST
Last Updated 11 ಅಕ್ಟೋಬರ್ 2025, 2:57 IST
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ಶಾಂತಲಾ ಚಾರಿಟೇಬಲ್ ಟ್ರಸ್ಟ್ ತಾನಿನಾ ರಂಗದಂಗಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿಂಗಳಾ ಕಲಾ ಬೆಳಕು ಕಾರ್ಯಕ್ರಮದಲ್ಲಿ ರಂಗಕರ್ಮಿ ಮಾಲತೇಶ ಬಡಿಗೇರ ಅವರಿಗೆ ‘ರಂಗ ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಹಾಗೂ ಇತರರು ಇದ್ದಾರೆ
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ಶಾಂತಲಾ ಚಾರಿಟೇಬಲ್ ಟ್ರಸ್ಟ್ ತಾನಿನಾ ರಂಗದಂಗಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿಂಗಳಾ ಕಲಾ ಬೆಳಕು ಕಾರ್ಯಕ್ರಮದಲ್ಲಿ ರಂಗಕರ್ಮಿ ಮಾಲತೇಶ ಬಡಿಗೇರ ಅವರಿಗೆ ‘ರಂಗ ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಹಾಗೂ ಇತರರು ಇದ್ದಾರೆ   

ರಾಮನಗರ: ‘ಜಾತಿ ಮತ್ತು ಧರ್ಮಗಳನ್ನು ಮೀರಿದ ಕಲೆಯಾದ ರಂಗಭೂಮಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮಾನವೀಯತೆ ಸಾರುವ ರಂಗಭೂಮಿಯ ಒಡನಾಟವು ಆತ್ಮಾವಲೋಕನಕ್ಕೂ ದಾರಿಯಾಗಿದೆ. ಸಮಾಜವನ್ನು ಬೆಸೆಯುವ ಜೊತೆಗೆ ಮಾನವೀಯ ಸಮಸ್ಯೆಗಳ ಪರಿಹಾರಕ್ಕೆ ಸುಲಭ ಮಾರ್ಗ ತೋರುತ್ತದೆ’ ಎಂದು ರಂಗಕರ್ಮಿ ಮಾಲತೇಶ ಬಡಿಗೇರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ಶಾಂತಲಾ ಚಾರಿಟಬಲ್ ಟ್ರಸ್ಟ್ ತಾನಿನಾ ರಂಗದಂಗಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಂಗಭೂಮಿಯು ಎಲ್ಲ ಕಲಾ ಪ್ರಕಾರಗಳ ತಾಯಿ ಬೇರು’ ಎಂದು ಹೇಳಿದರು.

‘ರಂಗಭೂಮಿ ಕಲೆಯನ್ನು ಕಲಿತ ಕಲಾವಿದರು, ಎಲ್ಲಾ ಪ್ರಕಾರಗಳ ನಟನೆಗಳಲ್ಲಿಯೂ ನೈಪುಣ್ಯತೆ ಪಡೆಯುತ್ತಾರೆ. ಕಲಾವಿದರಾಗಿ ಕಲೆ ಮತ್ತು ಸಾಹಿತ್ಯಕ್ಕೆ ಜೀವಕಳೆಯನ್ನು ತಂದು ಕೊಡುತ್ತಾರೆ. ಚಿತ್ರಕಲಾ ಶಿಕ್ಷಕನಾಗಬೇಕೆಂಬುದು ನನ್ನ ತಂದೆ–ತಾಯಿ ಆಸೆಯಾಗಿತ್ತು. ಆದರೆ, ನಾನು ನಾಟಕ ಮತ್ತು ಸಿನಿಮಾಗಳಿಂದ ಪ್ರಭಾವಿತನಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ’ ಎಂದರು.

ADVERTISEMENT

ಟ್ರಸ್ಟ್‌ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ, ‘ಹಿರಿಯ ರಂಗಕರ್ಮಿಯಾದ ಮಾಲತೇಶ ಬಡಿಗೇರ ಅವರು ರಂಗಭೂಮಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಬಹಳ ದೊಡ್ಡದು. ತಮ್ಮ ಮೂರು ದಶಕದ ರಂಗ ಪಯಣದಲ್ಲಿ ಹಲವರನ್ನು ಅವರು ಬೆಳೆಸಿದ್ದಾರೆ. ಇಂದಿಗೂ ಯುವಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ’ ಎಂದರು.

‘ಬಡಿಗೇರ ಅವರು ನೀಡಿರುವ ಕೊಡುಗೆ ಹಾಗೂ ಸಾಧನೆ ಪರಿಗಣಿಸಿ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ. ಅಂತಹ ಮಹನೀಯರಿಗೆ ಕಲಾ ಬೆಳಕು ಕಾರ್ಯಕ್ರಮದಲ್ಲಿ ಸನ್ಮಾನಿಸಿರುವುದು ನಮ್ಮ ಭಾಗ್ಯ. ಅವರು ಮತ್ತಷ್ಟು ಸಾಧನೆಗಳನ್ನು ಮಾಡಲಿ. ಅವರ ಮಾರ್ಗದರ್ಶನದಲ್ಲಿ ಯುವ ತಲೆಮಾರು ಬೆಳೆಯಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಟ್ರಸ್ಟ್ ವತಿಯಿಂದ ಮಾಲತೇಶ ಬಡಿಗೇರ ಅವರಿಗೆ ‘ರಂಗ ಸಾರ್ವಭೌಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವೇದ ಸಿ.ವಿ., ಡಾ. ರಾಜಶೇಖರ ಸಿ., ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಪ್ರೊ. ನಾರಾಯಣ ಘಟ್ಟ, ರಂಗಭೂಮಿ ನಟಿ ಛಾಯಾ ಭಾರ್ಗವಿ, ಐಶ್ವರ್ಯ ಕಲಾನಿಕೇತನ ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಇತರರು ಇದ್ದರು. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಮೂರು ದಶಕದ ರಂಗ ನಂಟು

‘ನನ್ನಿಷ್ಟದ ರಂಗಭೂಮಿಯಲ್ಲಿ ಕಳೆದ 30 ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಸಾವಿರಾರು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಹವ್ಯಾಸಿ ರಂಗಭೂಮಿ ಕಲಾವಿದರಿಗೆ ಮಹಿಳೆಯರಿಗೆ ವೈವಿದ್ಯಮಯ ನಾಟಕಗಳನ್ನು ಕಲಿಸಿದ್ದೇನೆ. ಕುವೆಂಪು ಚಂದ್ರಶೇಖರ ಕಂಬಾರ ಸೇರಿದಂತೆ ಹಲವರ ನಾಟಕಗಳನ್ನು ನಿರ್ದೇಶಿಸಿದ್ದೇನೆ. ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಮಾತ್ರ ಸಾಧನೆ ಮಾಡಲು ಸಾದ್ಯ. ದೇಸಿ ಕಲೆಗಳನ್ನು ಉಳಿಸಿ ಬೆಳೆಸಬೇಕಾದರೆ ತಾಳ್ಮೆ ಅಗತ್ಯ. ಕಲೆ ಆಲದಮರದಂತೆ ವಿಶಾಲವಾದುದು. ಕಲೆಗಳನ್ನು ಕಲಿಯಲು ಹತ್ತಾರು ವರ್ಷಗಳು ಬೇಕಾಗುತ್ತದೆ. ಅದಕ್ಕೆ ತಪಸ್ಸಿನಂತೆ ಶ್ರಮ ಹಾಕಬೇಕಾಗುತ್ತದೆ’ ಎಂದು ಬಡಿಗೇರ ಅವರು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.