ರಾಮನಗರ: ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಡೀಸೆಲ್ ಜನರೇಟರ್ ಘಟಕದ ಒಳ ನುಗ್ಗಿರುವ ಕಳ್ಳರು, ಜನರೇಟರ್‌ನ ಸುಮಾರು ₹2.60 ಲಕ್ಷ ಮೌಲ್ಯದ 2 ಮದರ್‌ಬೋರ್ಡ್ ಪ್ಯಾನಲ್ ಹಾಗೂ 1 ಕಂಟ್ರೋಲ್ ಬೋರ್ಡ್ ಪ್ಯಾನಲ್ ಕದ್ದೊಯ್ದಿದ್ದಾರೆ. ಈ ಕುರಿತು, ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆ ಆವರಣದಲ್ಲಿ 320 ಕೆ.ವಿ ಸಾಮರ್ಥ್ಯದ ಡೀಸೆಲ್ ಜನರೇಟರ್ ಘಟಕವಿದ್ದು, ಸುತ್ತಲೂ ಮೆಟಲ್ ಜಾಲರಿಯನ್ನು ಅಳವಡಿಸಲಾಗಿದೆ. ಅದರ ಮೇಲ್ವಿಚಾರಣೆಯನ್ನು ಸಿವಿಲ್ ಎಂಜನಿಯರೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಅ. 3ರಂದು ಬೆಳಿಗ್ಗೆ ಎಂಜಿನಿಯರ್ ಘಟಕಕ್ಕೆ ಭೇಟಿ ನೀಡಿದಾಗ, ಜಾಲರಿ ತೆರೆದುಕೊಂಡಿತ್ತು.
ಒಳಗಡೆ ಹೋಗಿ ನೋಡಿದಾಗ ಜನರೇಟರ್‌ನ 2 ಮದರ್‌ಬೋರ್ಡ್ ಪ್ಯಾನಲ್ ಹಾಗೂ 1 ಕಂಟ್ರೋಲ್ ಬೋರ್ಡ್ ಪ್ಯಾನಲ್ ಅನ್ನು ಬಿಚ್ಚಿಕೊಂಡು ಹೋಗಿರುವುದು ಗೊತ್ತಾಯಿತು. ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಜನರೇಟರ್ ಟೆಕ್ನಿಷಿಯನ್ ರಾತ್ರಿ 7.30ರ ಸುಮಾರಿಗೆ ಘಟಕಕ್ಕೆ ಹೋಗಿ ಪರಿಶೀಲಿಸಿ ಬಂದಿದ್ದರು. ಮಧ್ಯರಾತ್ರಿ ಕಳ್ಳರು ಜಾಲರಿಗೆ ಅಳವಡಿಸಿದ್ದ ಬೀಗವನ್ನು ಒಡೆದು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿ. ಮಂಜುನಾಥ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.