ADVERTISEMENT

ರಾಮನಗರ: ಹೊಸದೊಡ್ಡಿ ಮನೆಗಳಲ್ಲಿ ಸರಣಿ ಕಳ್ಳತನ

ರಾತ್ರಿ ಕೃತ್ಯ ಎಸಗಿರುವ ಕಳ್ಳರು; ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 14:15 IST
Last Updated 25 ಫೆಬ್ರುವರಿ 2024, 14:15 IST

ರಾಮನಗರ: ತಾಲ್ಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಳ್ಳರು ಐದು ಮನೆಗಳಿಗೆ ಕನ್ನ ಹಾಕಿ, ₹21,500 ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ₹6,500 ನಗದು ಕದ್ದಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದ ಎಚ್‌.ಎಂ. ವೆಂಕಟೇಶ್, ಭಾಗ್ಯಮ್ಮ, ಯುಗೇಂದ್ರ, ಲಕ್ಷ್ಮಣ್ ಹಾಗೂ ಕೇಶವಮೂರ್ತಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ವೆಂಕಟೇಶ್ ಅವರ ಮನೆಯ ಬಾಗಿಲನ್ನು ಕಬ್ಬಿಣದ ಸರಳಿನಿಂದ ಮೀಟಿ ಒಳಕ್ಕೆ ನುಗ್ಗಿರುವ ಕಳ್ಳರು, ಅಲ್ಮೇರಾದಲ್ಲಿದ್ದ 700 ಗ್ರಾಂ ತೂಕದ 2 ಬೆಳ್ಳಿ ದೀಪಗಳನ್ನು ಕದ್ದಿದ್ದಾರೆ. ಯುಗೇಂದ್ರ ಅವರ ಬಾಗಿಲು ಒಡೆದು 2 ಗ್ರಾಂ ಚಿನ್ನದುಂಗುರ, ಬೆಳ್ಳಿ ಕಾಲು ಚೈನು ಹಾಗೂ ₹5 ಸಾವಿರ ನಗದು, ಭಾಗ್ಯಮ್ಮ ಅವರ ಮನೆಯಲ್ಲಿ ₹1,500 ನಗದು ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಉಳಿದವರ ಮನೆಯ ಬಾಗಿಲು ಮೀಟಿ ಒಳಗೆ ಬಂದಿರುವ ಕಳ್ಳರು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ ಕೆಲ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಕೃತ್ಯ ನಡೆದಿರುವ ಕೆಲ ಮನೆಗಳ ಮಾಲೀಕರು ಬೇರೆ ಕಡೆ ವಾಸವಾಗಿದ್ದರು. ಕೆಲವರು ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಗಳಿಗೆ ಬೀಗ ಹಾಕಿರುವುದನ್ನ ನೋಡಿಯೇ ಕಳ್ಳರು ಕನ್ನ ಹಾಕಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಅಕ್ಕ–ತಮ್ಮ ನಾಪತ್ತೆ

ಶಾಲೆ ಮತ್ತು ಕಾಲೇಜಿಗೆ ಹೋಗಿದ್ದ ಮಕ್ಕಳಿಬ್ಬರು ನಾಪತ್ತೆಯಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಫೆ. 22ರಂದು ನಡೆದಿದೆ. ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ಕುಸುಮಾ ಹಾಗೂ ಸಾಗರ್ ಕಾನ್ವೆಂಟ್‌ನ 9ನೇ ತರಗತಿ ವಿದ್ಯಾರ್ಥಿ ಸುಭಾಷ್ ಕಾಣೆಯಾದರು.

ಬೆಳಿಗ್ಗೆ ಇಬ್ಬರು ಮನೆಯಿಂದ ಹೋಗಿದ್ದರು. 10.30ರ ಸುಮಾರಿಗೆ ಕಾಲೇಜಿನಿಂದ ಕರೆ ಮಾಡಿದ್ದ ಸಿಬ್ಬಂದಿ, ನಿಮ್ಮ ಮಗಳಿನ್ನೂ ಪರೀಕ್ಷೆಗೆ ಬಂದಿಲ್ಲ ಎಂದು ಹೇಳಿದ್ದರು. ಆಕೆ ವಿಚಾರಿಸುವ ಸಲುವಾಗಿ ಮಗನ ಶಾಲೆಗೆ ಹೋಗಿ ವಿಚಾರಿಸಿದಾಗ ಆತ ಕೂಡ ಹೋಗಿಲ್ಲದಿರುವುದು ಗೊತ್ತಾಯಿತು ಎಂದು ವಿದ್ಯಾರ್ಥಿನಿ ತಾಯಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಕಗ್ಗಲಿಪುರ ಠಾಣೆ ಪೊಲೀಸರು ಹೇಳಿದರು.

ಇಬ್ಬರನ್ನೂ ಹುಡುಕಾಡುತ್ತಿದ್ದಾಗ, ನಮ್ಮ ಮನೆಯ ಕೃಷ್ಣಪ್ಪ ಎಂಬುವರ ಮಗ ವಿನಯ್ ಪಾಟೀಲ್ ಎಂಬಾತ ಸಹ ನಾಪತ್ತೆಯಾಗಿರುವ ವಿಷಯ ತಿಳಿಯಿತು. ಮಧ್ಯಾಹ್ನ 2.30ರ ಸುಮಾರಿಗೆ ಕರೆ ಮಾಡಿದ ಕುಸುಮಾ, ಪರೀಕ್ಷೆ ಮುಗಿದಿದ್ದು ಮನೆಗೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಮನೆಗೆ ಬಂದಿಲ್ಲ. ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರನ್ನು ವಿಚಾರಿಸಿದರೂ ಪತ್ತೆಯಾಗಿಲ್ಲ. ಕಡೆಗೆ ಠಾಣೆಗೆ ಬಂದು ಮೂವರು ನಾಪತ್ತೆಯಾಗಿರುವ ಕುರಿತು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.